ಕಲೆಯನ್ನು ಕಲಿಸಿ ಬೆಳೆಸುವ ಕೆಲಸವಾಗಬೇಕು: ರಾಣಿ ಮಾಚಯ್ಯ

3adarshkdga3
Published on

ಮಡಿಕೇರಿ: ಕೊಡವ ಸಂಸ್ಕೃತಿಯ ಭಾಗವಾಗಿರುವ ಕಲೆಗಳನ್ನು ಕಲಿಯುವ ಹಾಗೂ ಕಲಿಸುವ ಕೆಲಸವಾಗಬೇಕು ಎಂದು ಪದ್ಮಶ್ರೀ ಪುರಸ್ಕೃತೆ ರಾಣಿ ಮಾಚಯ್ಯ ಹೇಳಿದರು.


ಕೊಡವ ಸಮಾಜ ಹಾಗೂ ಪೊಮ್ಮಕ್ಕಡ ಕೂಟದ ವತಿಯಿಂದ ಕೊಡವ ಸಮಾಜದಲ್ಲಿ ಶುಕ್ರವಾರ ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.


ಕೊಡವ ಸಂಸ್ಕೃತಿಯ ಭಾಗವಾಗಿರುವ ಬೊಳಕಾಟ್, ಕೋಲಾಟ್ ಕಲೆಗಳು ಪ್ರಸಿದ್ಧಗೊಳ್ಳಬೇಕು. ಇವುಗಳನ್ನು ಕಲಿಯುವ ಹಾಗೂ ಕಲಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ನನ್ನ ಪ್ರಯತ್ನ ಮುಂದುವರೆಯಲಿದೆ. ಉಮ್ಮತ್ತಾಟ್ ಕಲಿಯಲು ಜನಾಂಗದ ಮಹಿಳೆಯರು ಮುಂದೆ ಬರಬೇಕು. ಇದರಿಂದ ಸಂಸ್ಕೃತಿಯ ರಕ್ಷಣೆ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ವಿಧಾನ ಪರಿಷತ್ತು ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಮಾತನಾಡಿ, ಕೊಡವ ಮಹಿಳೆಯರಿಗೆ ರಾಣಿ ಮಾಚಯ್ಯ ಮಾದರಿಯಾಗಿ ನಿಂತಿದ್ದಾರೆ. ಮಹಿಳೆಯರು ಸಾಂಸ್ಕೃತಿಕವಾಗಿ ತೊಡಗಿಸಿಕೊಳ್ಳಲು ಪುರುಷರು ಪ್ರೋತ್ಸಾಹ ನೀಡಬೇಕು. ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುವಂತಾಗಬೇಕು ಎಂದು ಕರೆ ನೀಡಿದರು.


ಕರ್ನಾಟಕ ಜೀವ ವೈವಿದ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿಕಾಳಪ್ಪ ಮಾತನಾಡಿ, ರಾಣಿ ಮಾಚಯ್ಯರವರು ಕೊಡವ ಜನಾಂಗಕ್ಕೆ ಹೆಮ್ಮೆ ತರುವುದರ ಜತೆಗೆ ಕೊಡವ ಸಾಂಸ್ಕೃತಿಕ ಕಲೆಯಾದ ಉಮ್ಮತ್ತಾಟ್‌ಗೆ ಜಾಗತಿಕ ಮನ್ನಣೆ ನೀಡಿದ್ದಾರೆ ಎಂದು ಶ್ಲಾಘಿಸಿದರು.


ಮಾಜಿ ಸಚಿವ ಮೇರಿಯಂಡ.ಸಿ.ನಾಣಯ್ಯ ಮಾತನಾಡಿ, ಮೊಳ್ಳೇರ ಗಣೇಶ್, ಕೋದಂಡ ರೋಹಿಣಿ ಅವರ ಬಳಿಕ ರಾಣಿ ಮಾಚಯ್ಯ ಅವರಿಗೆ ಪದ್ಮಶ್ರೀ ಲಭಿಸಿರುವುದು ಕೊಡಗಿಗೆ ಹೆಮ್ಮೆ ತಂದಿದೆ. ಉಮ್ಮತ್ತಾಟ್ ಮೂಲಕ ಕೊಡವ ಸಂಸ್ಕೃತಿಯನ್ನು ದೇಶದ ವಿವಿಧೆಡೆ ಮುಟ್ಟಿಸಿದ್ದಾರೆ. ನಿಸ್ವಾರ್ಥವಾಗಿ ತರಬೇತಿ ನೀಡಿದ ಪರಿಣಾಮ ಇಂದು ದೊಡ್ಡ ಗೌರವ ಹುಡುಕಿ ಬಂದಿದೆ. ಕೊಡವರಲ್ಲಿ ಒಗ್ಗಟ್ಟು ಇರಬೇಕು. ಜನಾಂಗದ ಬಗ್ಗೆ ಹೆಮ್ಮೆ ಇರಬೇಕು. ಕೊಡವರ ಒಳ್ಳೆಯ ಪ್ರಯತ್ನಗಳಿಗೆ ಕೈಜೋಡಿಸಬೇಕು. ರಾಜಕೀಯವಾಗಿ ಸಂಘಟಿತರಾಗಬೇಕು ಎಂದು ನಾಣಯ್ಯ ಕರೆ ನೀಡಿದರು.


ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಧಾನ ಪರಿಷತ್ತು ಮಾಜಿ ಸದಸ್ಯ ಮಂಡೇಪಂಡ ಸುನಿಲ್ ಸುಬ್ರಮಣಿ, ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಸಮಾಜದ ಕಾರ್ಯದರ್ಶಿ ಕನ್ನಂಡ ಸಂಪತ್, ಪ್ರಮುಖರಾದ ಬೊಪ್ಪಂಡ ಸರಳ ಕರುಂಬಯ್ಯ, ಕೇಟೋಳಿರ ವಿಜು ದೇವಯ್ಯ ಹಾಜರಿದ್ದರು.


ನಗರದಲ್ಲಿ ಮೆರವಣಿಗೆ: ರಾಣಿ ಮಾಚಯ್ಯ ಅವರನ್ನು ತೆರೆದ ವಾಹನದಲ್ಲಿ ಮುಖ್ಯಬೀದಿಯಲ್ಲಿ ಮೆರವಣಿಗೆ ನಡೆಯಿತು. ಮಡಿಕೇರಿಯ ಎವಿ ಶಾಲೆ ಬಳಿಯಿಂದ ತೆರೆದ ಜೀಪ್‌ನಲ್ಲಿ ಮೆರವಣಿಗೆ ಆರಂಭವಾಗಿ ಇಂದಿರಾಗಾಂಧಿ ವೃತ್ತಕ್ಕಾಗಿ ಜನರಲ್ ತಿಮ್ಮಯ್ಯ ವೃತ್ತದ ಮೂಲಕ ಓಂಕಾರೇಶ್ವರ ದೇವಸ್ಥಾನ ಮಾರ್ಗವಾಗಿ ತೆರಳಿ ಕೊಡವ ಸಮಾಜ ತಲುಪಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net