ಸೌಂದರ್ಯ ಪ್ರಜ್ಞೆ ಬೆಳೆಸುವ ಕಲೆ,  ಕಲಾವಿದ ಎಂ.ಜೆ. ಬಂಗ್ಲೆವಾಲೆ ಅಭಿಮತ,  ಸಪ್ನಾ ಬುಕ್ ಹೌಸ್ ನಲ್ಲಿ ಆರ್ಟ್ ಫೆಸ್ಟಗೆ ಚಾಲನೆ

IMG_20250817_125158_460-1.jpg
Published on

ಹುಬ್ಬಳ್ಳಿ: ಚಿತ್ರಕಲೆಯು ನಮ್ಮ ಸಂಸ್ಕೃತಿ ಬೆಳವಣಿಗೆಗೆ ಪುಷ್ಠಿ ನೀಡುವ ಕೆಲಸ ಮಾಡುತ್ತದೆ. ಮನುಷ್ಯನಲ್ಲಿ ಸೌಂದರ್ಯ ಪ್ರಜ್ಞೆ ಮೂಡಿಸುತ್ತದೆ ಎಂದು ಕಲಾವಿದ ಎಂ.ಜೆ. ಬಂಗ್ಲೆವಾಲೆ ಹೇಳಿದರು.

ಇಲ್ಲಿಯ ಸಪ್ನಾ ಬುಕ್ ಹೌಸ್ ನಲ್ಲಿ ಭಾನುವಾರ ಏರ್ಪಡಿಸದ್ದ ಹುಬ್ಬಳ್ಳಿ ಆರ್ಟ್ ಫೆಸ್ಟಿವಲ್ ಹಾಗೂ ಪೋಯೆಟ್ರಿ ಫೆಸ್ಟಿವಲ್ ಉದ್ಘಾಟಿಸಿ ಅವರು ಮಾತನಾಡಿದರು.

ವಾಣಿಜ್ಯನಗರಿಯಲ್ಲಿ ಇಂತಹ ವಿಶೇಷ ಕಾರ್ಯಕ್ರಮ ನಡೆಯುತ್ತಿರುವುದು ಶ್ಲಾಘನೀಯ ಕಾರ್ಯ. ಇದಕ್ಕೆ ಕಲಾವಿದರು ಸಹಕಾರ ನೀಡಲಿದ್ದಾರೆ ಎಂದರು.

ಆರ್ಟವಾಲೆ ಸಂಸ್ಥಾಪಕ ಗೌತಮ ಓಸ್ತವಾಲ್ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ಒಂದು ಕಲೆ ಇರುತ್ತದೆ. ಆರ್ಟ ಫೆಸ್ಟಿವಲ್ ನಿಂದ ಕಲಾವಿದರಿಗೆ ಉತ್ತಮ ವೇದಿಕೆ ಸಿಕ್ಕಂತಾಗುತ್ತದೆ. ಒಂದು ಉತ್ತಮ ಕಲ್ಪನೆ ಇಟ್ಟುಕೊಂಡು ಚಿತ್ರ ಬಿಡಿಸಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕೆಂದು ಹೇಳಿದರು.

ಒಂದು ಕಲೆಯಿಂದ ಪುಸ್ತಕ ಓದಿದಷ್ಟು ಜ್ಞಾನ ಸಿಗುತ್ತದೆ. ಸ್ಪರ್ಧೆಗೆ ಬರುವ ಉತ್ತಮ ಚಿತ್ರಕಲೆಗಳಿಗೆ ಸಂಸ್ಥೆಯಿಂದ ಪ್ರೋತ್ಸಾಹ ನೀಡಲಾಗುವುದು ಎಂದರು.

ಸಪ್ನ ಬುಕ್ ಹೌಸ್ ಶಾಖಾ ವ್ಯವಸ್ಥಾಪಕ ರಘು ಎಂ.ವಿ. ಮಾತನಾಡಿ, ಆರ್ಟ್ ಫೆಸ್ಟಿವಲ್ ಗೆ ಹಿಂದಿನ ವರ್ಷಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಲಾವಿದರ ಕಲ್ಪನೆಯಲ್ಲಿ ಹುಬ್ಬಳ್ಳಿಯನ್ನು ಸುಂದರಗೊಳಿಸಬೇಕೆಂಬ ಆಶಯದೊಂದಿಗೆ ಅದೇ ಹುಮ್ಮಸ್ಸಿನಲ್ಲಿ ಮತ್ತೆ ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು.

ಪ್ರಾಸ್ತಾವಿಕ ಮಾತನಾಡಿದ ಸಾಫ್ಟವೇರ್ ಇಂಜಿನಿಯರ್ ಅಭಿಷೇಕ ಬೆಂಡಿಗೇರಿ, ಸ್ಪರ್ಧಿಗಳು ಸಪ್ನಾ ಬುಕ್ ಹೌಸ್ ಗೆ ಬಂದು ಚಿತ್ರ ಬಿಡಿಸುವ ಶೀಟ್ ತೆಗೆದುಕೊಂಡು ಹೋಗಬೇಕು. ಅದರಲ್ಲಿ ಚಿತ್ರ ಬಿಡಿಸಿ ಅಕ್ಟೋಬರ್ 12ರೊಳಗೆ ತಂದು ಕೊಡಬೇಕು ಹಾಗೂ ಇದೇ ರೀತಿ ಕನ್ನಡ, ಇಂಗ್ಲಿಷ, ಹಿಂದಿ ಯಾವುದಾದರೂ ಒಂದು ಭಾಷೆಯಲ್ಲಿ ಕವನಗಳನ್ನು ಬರೆದು ಆನ್ ಲೈನ್ ನಲ್ಲಿ ಸೆಪ್ಟೆಂಬರ್ 30ರೊಳಗೆ ಸಲ್ಲಿಸಬೇಕು ಎಂದರು.

ಸ್ಥಳಿಯ ಬರಹಗಾರರು, ಕಲಾವಿದರಿಗೆ ವೇದಿಕೆ ನೀಡುವ ಉದ್ದೇಶದಿಂದ ಸ್ಪರ್ಧೆ ಏರ್ಪಡಿಸಲಾಗಿದೆ. ಇದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಎಲ್ಲವೂ ಉಚಿತವಾಗಿರಲಿದೆ ಎಂದರು.
ಮೇಘನ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net