

ಶಿವಮೊಗ್ಗ: ರಂಗಭೂಮಿ ಜಾತಿ, ಧರ್ಮದ ಕಟ್ಟುಪಾಡುಗಳನ್ನು ಮೀರಿ ಸಮಾಜಮುಖಿ ಆಲೋಚನೆಗಳನ್ನು ಬೆಳೆಸುತ್ತದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಹೇಳಿದರು.
ಬಾಪೂಜಿನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಶುಕ್ರವಾರ ಆಯೋಜಿಸಿದ್ದ ರಂಗ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ರಂಗ ಚಟುವಟಿಕೆಯಲ್ಲಿ ಕಲಿಕೆ ಮತ್ತು ಊಹೆ ಇರುತ್ತದೆ. ವಿದ್ಯಾರ್ಥಿಗಳು ಕಥೆ, ಕಾದಂಬರಿ, ಕವಿತೆಗಳನ್ನು ಓದಬೇಕು. ನಾಟಕ ನೋಡಬೇಕು. ಇದರಿಂದ ಉತ್ತಮ ನಡತೆ ಸಾಧ್ಯವಾಗುತ್ತದೆ. ಇವತ್ತಿನ ಸಾಮಾಜಿಕ ವ್ಯವಸ್ಥೆಯಲ್ಲಿ ಯುವಜನತೆ ನಡವಳಿಕೆ ಕೊರತೆ ಎದ್ದು ಕಾಣುತ್ತಿದೆ. ನೀತಿ, ನಡತೆಗಳ ತಾಯಿಬೇರಾಗಿ ರಂಗಭೂಮಿ ಕಾರ್ಯ ನಿರ್ವಹಿಸುತ್ತದೆ ಎಂದು ತಿಳಿಸಿದರು. ನಾಟಕದಲ್ಲಿ ಸುತ್ತಲಿನ ಪರಿಸರ, ವಸ್ತು ವಿಷಯ, ರಾಜಕಾರಣ ಒಳಗೊಂಡಂತೆ ಸಮಾಜವನ್ನು ಗ್ರಹಿಸುವ ಶಕ್ತಿ ಇರುತ್ತದೆ. ಯುವಜನತೆ ಸಾಂಸ್ಕೃತಿಕ ಮನಸ್ಸು ಹೊಂದುವುದರಿಂದ ಸಮಾಜ ಪರಿವರ್ತಿಸಬಹುದು. ಗ್ರಹಿಕೆ ಸಾಮರ್ಥ್ಯ, ಬುದ್ದಿಮತ್ತೆ, ವಾಕ್ಚಾತುರ್ಯ ಎಲ್ಲವೂ ಸಾಧ್ಯವಾಗುವುದು ರಂಗಭೂಮಿಯಿಂದ ಎಂದರು. ರಂಗಕರ್ಮಿ ಡಾ. ಎಚ್.ಎಸ್.ನಾಗಭೂಷಣ್ ಮಾತನಾಡಿ, ಇಂದು ವಿದ್ಯಾರ್ಥಿಗಳ ಬಗ್ಗೆ ತಪ್ಪು ಕಲ್ಪನೆ ಇದೆ. ಮೊಬೈಲ್ ಬಳಕೆಯಿಂದ ವಿದ್ಯಾರ್ಥಿಗಳಲ್ಲಿ ಆಲೋಚನಾ ಶಕ್ತಿ, ಕ್ರಿಯಾಶೀಲತೆ, ಏಕಾಗ್ರತೆ ನಾಶವಾಗುತ್ತಿದೆ. ನಾಟಕದಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಇಮ್ಮಡಿಯಾಗುತ್ತದೆ ಎಂದು ಹೇಳಿದರು. ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹೊನ್ನಾಳಿ ಚಂದ್ರಶೇಖರ್ ಮಾತನಾಡಿ, ರಂಗ ತರಬೇತಿ ನಮಗೆ ಎಲ್ಲವನ್ನೂ ಕಲಿಸುತ್ತದೆ. ಕಸ ಹೊಡೆಯುವುದರಿಂದ ಹಿಡಿದು ಸೆಲೆಬ್ರಿಟಿವರೆಗಿನ ಅವಕಾಶಗಳನ್ನು ರಂಗಭೂಮಿ ಕೊಡುತ್ತದೆ. ಅಭಿನಯ ನಮ್ಮ ಜೀವನದಲ್ಲಿ ಅಂತರ್ಗತವಾಗಿರುತ್ತದೆ ಎಂದು ತಿಳಿಸಿದರು. ಪ್ರಾಚಾರ್ಯ ಪ್ರೊ. ಬಿ.ಜಿ.ಚನ್ನೇಶ ಹೊನ್ನಾಳಿ ಮಾತನಾಡಿ, ನಾಟಕದ ಮೂಲಕ ಸಮಾಜವನ್ನು ಎಚ್ಚರದಿಂದ ಇಡಲು ಸಾಧ್ಯ. ರಂಗಭೂಮಿ ಮನುಷ್ಯರನ್ನು ಮನುಷ್ಯರನ್ನಾಗಿ ತೋರಿಸುತ್ತದೆ ಎಂದರು. ರಂಗಕರ್ಮಿಗಳಾದ ರಾಜಕುಮಾರ್, ಲಕ್ಷ್ಮೀ, ರಂಗ ತರಬೇತಿ ಸಂಚಾಲಕ ಡಾ. ಅಣ್ಣಪ್ಪ ಮಳೀಮಠ್, ಉಪನ್ಯಾಸಕಿ ಶ್ವೇತಾ, ಪವಿತ್ರಾ ಉಪಸ್ಥಿತರಿದ್ದರು.
ಇಂದಿನ ಯುವಜನತೆ ಕಾಲೇಜು ಹಂತದಲ್ಲಿ ರಂಗಭೂಮಿಯಲ್ಲಿ ತೊಡಗಿಸಿಕೊಂಡು ಸಮಾಜಮುಖಿಯಾಗಿ ಆಲೋಚಿಸುವುದು ಅಗತ್ಯ. ಇದರಿಂದ ಶೈಕ್ಷಣಿಕ, ವೈಚಾರಿಕವಾಗಿ ಬೆಳೆಯಲು ಸಾಧ್ಯ. - ಡಾ. ಗಣೇಶ ಕೆಂಚನಾಲ, ರಂಗ ತರಬೇತಿ ನಿರ್ದೇಶಕ