

ಶಿಕಾರಿಪುರ: ಪ್ರತಿ ಕಲಾವಿದ ಕಲೆಗೆ ತನ್ನನ್ನು ಸಮರ್ಪಿಸಿಕೊಂಡಿರುತ್ತಾನೆ. ಆತನಿಗೆ ಕಲೆಯೇ ಸರ್ವಸ್ವ. ಕಲೆಯೇ ಬದುಕು, ಕಲೆಯೇ ಉಸಿರು, ಕಲೆಯೇ ಬೆಳಕು ಎಂದು ವಿದುಷಿ ಚಿತ್ಮಲ್ ಸತೀಶ್ ಹೇಳಿದರು.
ಭಾನುವಾರ ರಾತ್ರಿ ನೂಪುರ ಭರತನಾಟ್ಯ ಕಲಾ ಕೇಂದ್ರ ಪಟ್ಟಣದ ವೀರಶೈವ ಕಲ್ಯಾಣ ಮಂದಿರದಲ್ಲಿ ಆಯೋಜಿಸಿದ್ದ ಮಕ್ಕಳ ನೃತ್ಯ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಭರತನಾಟ್ಯ ಅತ್ಯಂತ ಶ್ರೇಷ್ಠ ವಾದ, ವಿಶಿಷ್ಟವಾದ ಈ ಮಣ್ಣಿನ ಕಲೆ. ಇದಕ್ಕೆ ಮಹಾದೇವ ನಟರಾಜನೇ ಸ್ಫೂರ್ತಿ. ಈ ನೃತ್ಯದಲ್ಲಿ ಹಲವಾರು ಪ್ರಾಕಾರಗಳಿವೆ. ಮುಖ್ಯವಾಗಿ ಕಂಗಳಿಂದ ಹಿಡಿದು ಎಲ್ಲ ಅಂಗಗಳಿಗೂ ವ್ಯಾಯಾಮವಾಗುತ್ತದೆ. ಈ ಅಪೂರ್ವ ಕಲೆಯು ಇಂದು ದೇಶ-ವಿದೇಶಗಳಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿದೆ ಎಂದರು.
ಯಾವುದೇ ಕಲಾವಿದನಾಗಲಿ ಶ್ರದ್ಧೆ, ಪರಿಶ್ರಮ ಹಾಗೂ ಸಾಧನೆ ಮಾಡಿದರೆ ಮಾತ್ರ ಯಶಸ್ವಿಯಾಗಲು ಸಾಧ್ಯವಾಗುತ್ತದೆ. ಪ್ರತಿಕ್ಷಣಗಳೂ ನಮಗೆ ಕಲಿಕೆಯ ಕ್ಷಣಗಳೇ ಆಗಿರಬೇಕು. ಮಕ್ಕಳಲ್ಲಿ ಆಸಕ್ತಿ ಇದ್ದಾಗ ಇಂಥ ಶಾಸ್ತ್ರೀಯ ಕಲೆಗಳಾದ ಭರತನಾಟ್ಯ, ನೃತ್ಯ, ಸಂಗೀತ, ವಾದ್ಯಗಳು ಸಮ್ಮಿಲನಗೊಂಡಾಗ ನಾಟ್ಯ ರೂಪುಗೊಳ್ಳುತ್ತದೆ ಎಂದು ಹೇಳಿದರು.
ಪ್ರಾಧ್ಯಾಪಕ ಡಾ. ದೇವರಾಜ್ ಮಾತನಾಡಿ, ಸೃಷ್ಟಿಕರ್ತ ಮತ್ತು ರಚನೆಕಾರ ಆ ಭಗವಂತನೇ. ನಾವೆಲ್ಲ ಪಾತ್ರಧಾರಿಗಳು. ಮಕ್ಕಳಿಗೆ ನೃತ್ಯದ ಹಿನ್ನೆಲೆಯ ಅರಿವು ಮೂಡಿಸಬೇಕು ಎಂದರು.
ಪ್ರಾಚಾರ್ಯ ಡಾ. ಎಂ.ವೀರೇಂದ್ರ ಮಾತನಾಡಿ, ಗುರು-ಶಿಷ್ಯರ ಸಮ್ಮಿಲನ ಒಂದು ಭಾವನಾತ್ಮಕ ಸಂಬಂಧ. ಗುರು ಎಂದರೆ ಜ್ಞಾನ, ಗುರು ಎಂದರೆ ಕತ್ತಲೆ ಕಳೆದು ಬೆಳಕನ್ನು ಕೊಡುವವನು. ಗುರುವಿರದೇ ವಿದ್ಯೆ ಸಿದ್ಧಿಸಲಾರದು. ಗುರುವಿನ ಬಗ್ಗೆ ಸದಾ ಗೌರವ ಇರಲಿ ಎಂದರು.
ಕಲಾ ಕೇಂದ್ರದಿಂದ ವಿದುಷಿ ಚಿತ್ಮಲ್ ಸತೀಶ್ ಅವರನ್ನು ಗೌರವಿಸಲಾಯಿತು. ನೂಪುರ ಕಲಾಕೇಂದ್ರದ ಪ್ರಾಚಾರ್ಯೆ ಚೈತನ್ಯ, ಸಾವಿತ್ರಮ್ಮ, ಶಿಲ್ಪಾ ಶ್ರೀಕಾಂತ್, ಉಪನ್ಯಾಸಕ ಕೆ.ವೈ.ಶಿವಕುಮಾರ್, ಪ್ರತಿಭಾ ವೀರೇಂದ್ರ, ಎನ್.ಕೆ.ಉಮಾ, ಅಶ್ವಿನಿ ದೇವರಾಜ್ ಇತರರಿದ್ದರು.