

ಮೈಸೂರು: ಮನುಷ್ಯನ ಜೀವನದಲ್ಲಿ ಕಲೆ, ಸಂಸ್ಕೃತಿಗಳು ಹಾಸುಹೊಕ್ಕಾಗಿವೆ. ಚಿತ್ರಕಲೆ ಸಾಮಾನ್ಯವಲ್ಲ. ಅದರಲ್ಲಿ ಅರ್ಥ, ಶಕ್ತಿ ಹಾಗೂ ಜೀವ ಇದೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ.ಕುಮಾರ್ ಹೇಳಿದರು.
ವಿಜಯನಗರದ ಶ್ರೀಕಲಾನಿಕೇತನ ಸ್ಕೂಲ್ ಆಫ್ ಆರ್ಟ್‌ನಲ್ಲಿ ಬಿವಿಎ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಸಾಂಪ್ರದಾಯಿಕ ಮತ್ತು ಸಮಕಾಲೀನ ಚಿತ್ರಕಲೆಯನ್ನು ಮುಂದಿನ ತಲೆಮಾರಿಗೆ ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಯುವ ಕಲಾವಿದರ ಮೇಲಿದೆ ಎಂದರು.
ಕಲೆ ಎಂಬುದು ಮಾನವನ ಅಭಿವ್ಯಕ್ತಿಗೆ ಇರುವ ಒಳ್ಳೆಯ ಸಾಧನ. ಕಲೆಯ ಮೂಲಕ ಮನಸ್ಸಿನ ತುಡಿತವನ್ನು ಜನರಿಗೆ ತಿಳಿಸಬಹುದು. ಕಲೆ ಮನುಷ್ಯನ ಬದುಕಿಗೆ ಪೂರಕವಾಗುವ ಜತೆಗೆ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯ ಎಂದರು.
ಚಿತ್ರಕಲೆಯಿಂದ ಕಲಿಕೆ ಮುಂದುವರಿಯುತ್ತದೆ ಹೊರತು ಚಿತ್ರಕಲೆ ಬಿಟ್ಟು ಕಲಿಕೆ ಮುಂದುವರಿಯಲಾರದು. ಪ್ರತಿ ಹಂತದಲ್ಲಿ ಮಕ್ಕಳ ಚಟುವಟಿಕೆ ಕಲಿಕೆಯ ಗತಿಯನ್ನು ತೀರ್ಮಾನಿಸುತ್ತದೆ. ಮಕ್ಕಳ ಪ್ರಗತಿಯನ್ನು ಚಿತ್ರಕಲೆಯಲ್ಲಿ ಕಾಣಬಹುದು. ಚಿತ್ರಕಲೆಯ ಪ್ರತಿಯೊಂದೂ ಮಗುವಿನಲ್ಲಿ ರಚನಾತ್ಮಕ ಶಕ್ತಿಯನ್ನು ವೃದ್ಧಿಗೊಳಿಸುತ್ತದೆ ಎಂದರು.
ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ, ಹಿರಿಯ ಕಲಾವಿದ ಎನ್.ರಾಘವೇಂದ್ರಮೂರ್ತಿ, ಸ್ಕೂಲ್ ಆಫ್ ಆರ್ಟ್‌ನ ಕಾರ್ಯದರ್ಶಿ ಬಾಬುರಾವ್, ಪ್ರಾಚಾರ್ಯ ಕೆ.ಸಿ.ಮಹದೇವಶೆಟ್ಟಿ, ರಂಗಕರ್ಮಿ ರಾಜಶೇಖರ್ ಕದಂಬ ಇತರರು ಇದ್ದರು.