

ಬೆಳಗಾವಿ: ಯುವಜನರು ಶಿಕ್ಷಣದೊಂದಿಗೆ ಕಲಾ ಪರಂಪರೆ ಮುಂದುವರಿಸಬೇಕು ಎಂದು ಹತ್ತರಗಿ ಕಾರಿಮಠದ ಗುರುಸಿದ್ಧೇಶ್ವರ ಸ್ವಾಮೀಜಿ ಹೇಳಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶ್ರೀ ರಾಮಕೃಷ್ಣ ಚಂದಗರಿ ಕಲಾ ಪ್ರತಿಷ್ಠಾನ ಸಹಯೋಗದಲ್ಲಿ ಸಂಕೇಶ್ವರದಲ್ಲಿ ಮಂಗಳವಾರ ಆಯೋಜಿಸಿದ್ದ ಯುವ ಸೌರಭ 2020-21 ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಕಲಾ ಪ್ರದರ್ಶನದಿಂದ ಕಲಾವಿದನಿಗೂ ಹಾಗೂ ನೋಡುಗರಿಗೂ ಸಂತಸ ಸಿಗುತ್ತದೆ ಎಂದರು. ಹಮೀದಾಬೇಗಂ ದೇಸಾಯಿ ಮಾತನಾಡಿ, ನಮ್ಮ ಕನ್ನಡ ಭಾಷೆ- ನಮ್ಮ ಸಾಂಸ್ಕೃತಿಕ ಕಲಾ ಪರಂಪರೆ ಉಳಿಸಬೇಕು. ಈ ನಿಟ್ಟಿನಲ್ಲಿ ಯುವ ಸೌರಭ ಕಾರ್ಯಕ್ರಮ ಗಡಿನಾಡು ಸಂಕೇಶ್ವರದಲ್ಲಿ ಆಯೋಜಿಸಿದ್ದು ಸೂಕ್ತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅದಕ್ಕೂ ಮುನ್ನ ಸಂಕೇಶ್ವರ ಪುರಸಭೆಯ ಮುಖ್ಯಾಧಿಕಾರಿ ಜಗದೀಶ ಈಟಿ ಜ್ಯೋತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿರಿಯ ಸಾಹಿತಿ
ಎಲ್.ವಿ.ಪಾಟೀಲ, ಕನ್ನಡಪರ ಕಾರ್ಯಕರ್ತ ಕಿರಣ ನೇಸರಿ, ಸಂಗೀತ ಕಲಾವಿದೆ ರೋಹಿಣಿ ವಿನಾಯಕ ಉಪಸ್ಥಿತರಿದ್ದರು. ಇದೇ ವೇಳೆ ವಿವಿಧ ಕ್ಷೇತ್ರದ ಯುವ ಕಲಾವಿದ ಪ್ರಣವ ಪಿ. ವಿನಾಯಕ, ಆರತಿ ಮಾದರ, ಪುಂಡಲೀಕ ದೊಡ್ಡಮನಿ, ಮಹಾಂತೇಶ ಕಂಬಾರ, ಚೈತ್ರಾ ಯಾಪಲಪರವಿ ಅವರನ್ನು ಸನ್ಮಾನಿಸಲಾಯಿತು.
ಯುವ ಸೌರಭ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಣವ ಪಿ. ವಿನಾಯಕ ತಂಡ ಶಾಸ್ತ್ರೀಯ ಸಂಗೀತ, ಮಹಾಲಕ್ಷ್ಮೀ ದೊಡ್ಡಮನಿ ಹಾಗೂ ತಂಡ ವಚನ ಸಂಗೀತ, ಮಹಾಂತೇಶ ಕಂಬಾರ ತಂಡ ಶಿವಭಜನಾ ಪದ, ಗುರುಪ್ರಸಾದ ಕಲಾಚಂದ್ರ ಹಾಗೂ ತಂಡ ಕೋಲಾಟ ನೃತ್ಯ, ಜ್ಯೋತಿ ಮಠಪತಿ ಹಾಗೂ ತಂಡ ತತ್ವಪದ, ಸ್ವರಸುರಭಿ ಸಂಗೀತ ಮಹಾವಿದ್ಯಾಲಯ ಸಮೂಹ ಗೀತೆ, ಚಿನ್ನು ವಸ್ತ್ರದ ತಂಡ ಸಮೂಹ ನೃತ್ಯ, ಅಕ್ಕವಹಾದೇವಿ ಮಾದರ ತಂಡ ಡೊಳ್ಳು ಕುಣಿತ, ಜಡಿಸಿದ್ದೇಶ್ವರ ಕಲಾ ತಂಡದ ಸಣ್ಣಾಟ ಪ್ರದರ್ಶನ, ಬಾಗೇವಾಡಿ ಕಲಾ ತಂಡದವರು ವರ್ಣ ರಂಜಿತ ಕಲಾಪ್ರದರ್ಶನ ನೀಡಿ ಪ್ರೇಕ್ಷಕರನ್ನು ರಂಜಿಸಿದರು. ಭರತ ಕಲಾಚಂದ್ರ, ಸುಜಾತಾ ಮಗದುಮ್ಮ ನಿರೂಪಿಸಿರು. ಸುರೇಶ ಚಂದಗರಿ ಸ್ವಾಗತಿಸಿದರು. ಅಕ್ಬರ್ ಸನದಿ ವಂದಿಸಿದರು.