

ಕೊಡಗು: ಸೋಮವಾರಪೇಟೆ ಯಡವನಾಡು ಗ್ರಾಮದ ಹೇಮಂತ್ ಪಾರೇರಾ ಅವರು ರಚಿಸಿರುವ ಮೌನ ಮುರಿದ ಕನವರಿಕೆಗಳು ಕವನ ಸಂಕಲನವನ್ನು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಇತ್ತೀಚೆಗೆ ಪಟ್ಟಣದ ಪತ್ರಿಕಾ ಭವನದಲ್ಲಿ ಬಿಡುಗಡೆಗೊಳಿಸಿದರು.
ಸಾಹಿತ್ಯ, ಕಲೆಗಳಿಗೆ ಬಾಂಧವ್ಯ ಬೆಸೆಯುವ ಶಕ್ತಿಯಿದೆ. ಬರವಣಿಗೆಗಳು ಹೊಸತನವನ್ನು ರೂಪಿಸಬೇಕು. ಹೇಮಂತ್ ಅವರ ಸಾಹಿತ್ಯ ಸೇವೆ ಇನ್ನಷ್ಟು ವೃದ್ಧಿಸಲಿ ಎಂದು ಅನಂತಶಯನ ಹಾರೈಸಿದರು.
ಹಿರಿಯ ಸಾಹಿತಿ, ಶಿಕ್ಷಕಿ ಸುನಿತಾ ಲೋಕೇಶ್ ಮಾತನಾಡಿ, ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕವಿಗಳ ಸಂಖ್ಯೆ ಹೆಚ್ಚುತ್ತಿರುವುದು, ಕವಿಗಳಿಗೆ ವೇದಿಕೆಗಳು ಸಿಗುತ್ತಿರುವುದು ಶ್ಲಾಘನೀಯ. ಕವಿಗಳಿಗೆ ಸೂಚ್ಯ ಬರವಣಿಗೆಯ ಬುದ್ಧಿವಂತಿಕೆ ಇರಬೇಕು. ಹೊಸದರತ್ತ ಕವನಗಳು ಅರಳಿದರೆ ಮಾತ್ರ ಪರಿಣಾಮಕಾರಿಯಾಗಬಲ್ಲದು ಎಂದರು.
ಹಿರಿಯ ಸಾಹಿತಿ ಭಾರಧ್ವಾಜ್ ಕೆ.ಆನಂದತೀರ್ಥ, ಬರಹಗಾರ ಡಾ.ಕುಶ್ವಂತ್ ಕೋಳಿಬೈಲು, ಯಡವನಾಡು ಶಿವಬಸವೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಗಣೇಶ್, ಅಕ್ಷರ ಸ್ನೇಹಿ ಬಳಗದ ಮಿಲನಾ ಭರತ್, ಪವಿತ್ರಾ ಧರ್ಮಪ್ಪ, ಸುಮತಿ ಇದ್ದರು.