

ಚನ್ನರಾಯಪಟ್ಟಣ: ತಾಲೂಕಿನಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ಮಾ.7 ರಂದು ‘ನಿಮ್ಮೊಂದಿಗೆ ನಾವು, ಕಲಾವಿದರ ನಡೆ-ಜನಸಾಮಾನ್ಯರ ಕಡೆ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿಯ ಸದಸ್ಯ ಸಂಚಾಲಕ ಎಚ್.ಎಸ್. ಮಂಜುನಾಥ್ ತಿಳಿಸಿದರು.
ಸಂಗೀತ, ನೃತ್ಯ ಹಾಗೂ ಚಿತ್ರಕಲೆಯಂತಹ ಲಲಿತಕಲೆಗಳಿಗೆ ಬಹಳಷ್ಟು ಬೆಲೆ ಇದೆ. ಈ ಕಲೆಗಳು ಭಾರತೀಯ ವೈಶಿಷ್ಟೃತೆ ಪ್ರತಿಬಿಂಬಿಸುತ್ತವೆ. ಇವು ನಮ್ಮ ಸಂಸ್ಕೃತಿಯ ಪ್ರತೀಕ. ಮಕ್ಕಳಲ್ಲಿ ಸಾಕಷ್ಟು ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸುವ ಹಾಗೂ ಹೊರತರುವ ಕೆಲಸವಾಗಬೇಕು. ಮಕ್ಕಳು ತಮ್ಮ ತಂದೆ ತಾಯಿಗಿಂತಲೂ ಗುರುಗಳಿಗೆ ಹೆಚ್ಚು ಗೌರವ ನೀಡುತ್ತಾರೆ. ಮಕ್ಕಳಲ್ಲಿನ ಚಿತ್ರಕಲೆ, ಸಂಗೀತದಂತಹ ಕಲೆಯನ್ನು ಪ್ರೋತ್ಸಾಹಿಸಲು ಕರ್ನಾಟಕ ಲಲಿತಕಲಾ ಅಕಾಡೆಮಿ, ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು, ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ವತಿಯಿಂದ ಪಟ್ಟಣದ ಗಣಪತಿ ಪೆಂಡಾಲಿನಲ್ಲಿ ಮಾ.7 ರಂದು ಬೆಳಗ್ಗೆ 10:30 ಗಂಟೆಗೆ ಚಿತ್ರಕಲಾ ಪ್ರದರ್ಶನ, ಉಪನ್ಯಾಸ, ಪ್ರಾತ್ಯಕ್ಷಿಕೆ ಶಾಲಾ ಮಕ್ಕಳಿಗೆ ಚಿತ್ರಕಲಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್.ದೀಪಾ ಉದ್ಘಾಟನೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಪ.ಸ.ಕುಮಾರ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಎನ್. ಅಶೋಕ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಜಿ.ಮಲ್ಲೇಗೌಡ, ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ವೈ.ಬಿ.ರವಿ, ಹಿರಿಯ ಚಿತ್ರಕಲಾ ಕಲಾವಿದರಾದ ಎಸ್.ವೈ.ಪ್ರಭಾಕರ್, ಸನಂತೇಗೌಡ, ಚಂದ್ರಶೇಖರ ಭಾಗವಹಿಸಲಿದ್ದಾರೆ. ‘ಶಿಕ್ಷಣದಲ್ಲಿ ಚಿತ್ರಕಲೆ’ ವಿಷಯ ಕುರಿತು ಜಿ.ಎಸ್. ಶಿವಶಂಕರಪ್ಪ ವಿಮರ್ಶೆ, ಹಿರಿಯ ಚಿತ್ರ ಕಲಾವಿದ ಬಿ.ಎಸ್. ದೇಸಾಯಿ ಅವರಿಂದ ಪ್ರಾತ್ಯಕ್ಷಿಕೆ ನಡೆಯಲಿದೆ. ಶಾಲಾ ಮಕ್ಕಳ ಕಲಾ ಶಿಬಿರದ ಪ್ರಾತ್ಯಕ್ಷಿಕೆ ಮತ್ತು ಕ್ರಿಯೇಟಿವ್ ಆರ್ಟ್ ವಿಷಯದ ಬಗ್ಗೆ ಕೆ.ಎನ್. ಶಂಕರಪ್ಪ, ಎ.ಸಿ.ಸುರೇಶ್, ಡಿ.ಎಸ್.ಚಂದ್ರಶೇಖರ, ಕೃಷ್ಣಾಚಾರಿ, ಚಂದ್ರಕಾಂತ್ ನಡೆಸಿಕೊಡಲಿದ್ದಾರೆ. ಶಿಬಿರದಲ್ಲಿ 50 ಶಾಲಾ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಹಾಸನ ಜಿಲ್ಲೆಯ ಸಮಾರು 50 ಜನ ಕಲಾವಿದರ 100 ಚಿತ್ರಕಲಾಕೃತಿಗಳು ಪ್ರದರ್ಶನಗೊಳ್ಳುತ್ತಿವೆ. ಎಲ್ಲ ಸಾರ್ವಜನಿಕರು ಮತ್ತು ಶಾಲಾ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಮುಖಂಡರಾದ ವೈ.ಎಸ್.ಪ್ರಭಾಕರ್ , ಡಿ.ಎಸ್. ಚಂದ್ರಶೇಖರ್, ಕೆ.ಮೋಹನ್ ಕುಮಾರ್ ಇದ್ದರು.