ಮಂಡ್ಯ: ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕಾರ್ಟೂನ್‌ಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದ ಪಿ.ಆರ್.ತಿಪ್ಪೇಸ್ವಾಮಿ ಯುವಜನರಿಗೆ ಪ್ರೇರಣೆಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಶ್ಲಾಘಿಸಿದರು.
ನಗರದ ಕರ್ನಾಟಕ ಸಂಘದ ಕೆವಿಎಸ್ ಶತಮಾನೋತ್ಸವ ಭವನದಲ್ಲಿ ಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನ ಮೈಸೂರು, ಕರ್ನಾಟಕ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಪಿ.ಆರ್.ತಿಪ್ಪೇಸ್ವಾಮಿ ಜನ್ಮದಿನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕಲಾವಿದರಾದ ತಿಪ್ಪೇಸ್ವಾಮಿ ಅವರು ಕಾರ್ಟೂನ್‌ಗಳನ್ನು ಬರೆದು ಸಾಕಷ್ಟು ಜನರಿಗೆ ತಲುಪಿಸಿ ಜಾಗೃತಿ ಮೂಡಿಸುತ್ತಿದ್ದರು. ತಮ್ಮ ಕಲಾ ಕೌಶಲದ ಮೂಲಕ ಯುವ ಜನರಿಗೆ ಪ್ರೇರಣೆ ನೀಡಿದ್ದಾರೆ ಎಂದರು.
ಸಮಾಜ ಸೇವೆಯನ್ನು ಮಾಡುತ್ತಿದ್ದ ಒಬ್ಬ ವ್ಯಕ್ತಿ, ಏನೆಲ್ಲ ಸಾಧನೆ ಮಾಡಬಹುದು ಎಂಬುದನ್ನು ಯುವಕರಿಗೆಲ್ಲ ತೋರಿಸಿಕೊಟ್ಟಿದ್ದಾರೆ. ತಿಪ್ಪೇಸ್ವಾಮಿ ಪ್ರತಿಷ್ಠಾನದವರು ಪ್ರತಿ ಜಿಲ್ಲೆಗೆ ಹೋಗಿ ಅವರ ಬಗ್ಗೆ ತಿಳಿ ಹೇಳುವ ಮೂಲಕ ಪ್ರೋತ್ಸಾಹ ನೀಡುವಂತಹ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಜಾನಪದ ಸಂಶೋಧನೆ, ಸಂಗ್ರಹ ಕ್ಷೀಣವಾಗುತ್ತಿರುವ ಈ ಸಂದರ್ಭದಲ್ಲಿ ಈ ರೀತಿ ಸಂಶೋಧನೆ ಮಾಡುವವರ ಸಂಗ್ರಹ ಮಾಡುವವರ ಅಗತ್ಯವಿದೆ. ಸಂಶೋಧನೆಯಿಂದ ನಮ್ಮ ಆಚಾರ-ವಿಚಾರ ಸಂಪ್ರದಾಯಗಳನ್ನು ತಿಳಿಯಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಕದಂಬ ಮಾತನಾಡಿ, ಪಿ.ಆರ್.ತಿಪ್ಪೇಸ್ವಾಮಿ ಅವರು ನಾಡು ಕಂಡ ಅಪ್ರತಿಮ, ಅಮೋಘ ಚಿತ್ರ ಕಲಾವಿದ ಹಾಗೂ ಜಾನಪದ ತಜ್ಞ. ಅವರು ರಚಿಸಿರುವ ಜಲವರ್ಣ ಚಿತ್ರಗಳು ರಾಷ್ಟ್ರಕವಿ ಕುವೆಂಪು ಅವರಿಂದ ಹಿಡಿದು ದೇಶ ವಿದೇಶಗಳ, ಗಣ್ಯಾತಿಗಣ್ಯರ ಮನೆ, ಮ್ಯೂಸಿಯಂನಲ್ಲಿ ನೆಲೆಗೊಂಡಿವೆ. ಅವರು ಸಾಹಿತಿಯಾಗಿಯೂ ಹೆಸರು ಮಾಡಿದ್ದಾರೆ. ಅದೆಲ್ಲಕ್ಕೂ ಮಿಗಿಲಾಗಿ ಮೈಸೂರು ವಿಶ್ವವಿದ್ಯಾನಿಲಯದ ಜನಪದ ವಸ್ತು ಸಂಗ್ರಹಾಲಯ, ಧರ್ಮಸ್ಥಳದ ಸಂಗ್ರಹಾಲಯ ಹಾಗೂ ಸುತ್ತೂರು ಮಠದ ವಸ್ತು ಸಂಗ್ರಹಾಲಯಗಳನ್ನು ಅತ್ಯಂತ ವೈಜ್ಞಾನಿಕವಾಗಿ ಅರ್ಥಪೂರ್ಣವಾಗಿ ನಿರ್ಮಿಸುವ ಮೂಲಕ ಮ್ಯೂಸಿಯಂ ಮಾಂತ್ರಿಕರೆಂದೇ ಹೆಸರಾಗಿದ್ದಾರೆ ಎಂದರು.
ಸಾಹಿತಿ ತೈಲೂರು ವೆಂಕಟಕೃಷ್ಣ ಅವರು ಜಾನಪದ-ಪಿಆರ್‌ಟಿ ಕುರಿತು ಹಾಗೂ ಚಿತ್ರಕಲೆ-ಪಿಆರ್‌ಟಿ ಕುರಿತು ಮೈಸೂರಿನ ಶ್ರೀಕಲಾನಿಕೇತನ ಸ್ಕೂಲ್ ಆಫ್ ಆರ್ಟ್ ಪ್ರಾಂಶುಪಾಲ ಕೆ.ಸಿ.ಮಹದೇವಶೆಟ್ಟಿ ವಿಚಾರ ಮಂಡಿಸಿದರು.
ಕರ್ನಾಟಕ ಸಂಘದ ಅಧ್ಯಕ್ಷ ಪೊ.ಬಿ.ಜಯಪ್ರಕಾಶಗೌಡ ಅಧ್ಯಕ್ಷತೆ ವಹಿಸಿದ್ದರು. ಪಿಆರ್‌ಟಿ ಭಾವಚಿತ್ರವನ್ನು ರೆಡ್ ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಸಂಸ್ಥೆಯ ಮೀರಾ ಶಿವಲಿಂಗಯ್ಯ ಅನಾವರಣಗೊಳಿಸಿದರು.
ಪ್ರತಿಷ್ಠಾನದ ಮಾನಸ, ಎಚ್.ಎಂ.ಪರಮೇಶ್ವರಯ್ಯ, ಬಾಬೂರಾವ್, ಚಿಕ್ಕಣ್ಣ, ಚಂದ್ರಶೇಖರಯ್ಯ, ಎಂ.ಯು.ಶ್ವೇತಾ, ಕರ್ನಾಟಕ ಸಂಘದ ಮಂಜುಳಾ ಉದಯಶಂಕರ್, ನಾಗಪ್ಪ ಹನಕೆರೆ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಚಿತ್ರಕಲಾ ಪ್ರದರ್ಶನ ಮತ್ತು ಚಿತ್ರಕಲಾ ಸ್ಪರ್ಧೆ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭ ನಗರದ ಸದ್ವಿದ್ಯಾ ಎಜುಕೇಷನ್ ಟ್ರಸ್ಟ್ ಆವರಣದಲ್ಲಿ ನೆರವೇರಿತು. ವಿಜೇತ ವಿದ್ಯಾರ್ಥಿಗಳು: ಕಿರಿಯ ಪ್ರಾಥಮಿಕ ಶಾಲಾ ವಿಭಾಗ- ಸದ್ವಿದ್ಯಾ ಚಿಲ್ಡ್ರನ್ ಶಾಲೆಯ ಎಂ.ಹರಿಣಿ(ಪ್ರ), ಧ್ರುವ ಚಿಂತನ್ (ದ್ವಿ), ಪರಮ್ ಕಿಷನ್(ತೃ), ಹಿರಿಯ ಪ್ರಾಥಮಿಕ ಶಾಲಾ ವಿಭಾಗ- ಸದ್ವಿದ್ಯಾ ಚಿಲ್ಡ್ರನ್ ಸ್ಕೂಲ್ ನ ಎಸ್.ಕೀರ್ತನಾ(ಪ್ರ) ಮತ್ತು ಡಿ.ಆರ್.ಹನಿ(ದ್ವಿ) ಹಾಗೂ ಪಿ.ಸ್ಕಂದಾ(ತೃ), ಪ್ರೌಢಶಾಲಾ ವಿಭಾಗದಲ್ಲಿ ಸದ್ವಿದ್ಯಾ ಶಾಲೆಯ ಕೆ.ಪಿ.ಅನನ್ಯ(ಪ್ರ), ಜೆ.ಧನುಶ್ರೀ(ದ್ವಿ) ಹಾಗೂ ಎಂಇಎಸ್ ಶಾಲೆಯ ಎಂ.ಆರ್.ಯಶ್ವಂತ್(ತೃ) ಬಹುಮಾನ ಗಳಿಸಿದ್ದಾರೆ.