

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತೀಯ ಕಲೆ ಮತ್ತು ಸಂಸ್ಕೃತಿಗಳು ಸಂಸ್ಕಾರದ ಬಲದಿಂದ ಜಗತ್ತಿನಲ್ಲೇ ಶ್ರೇಷ್ಠವಾಗಿವೆ. ಕುಟುಂಬ ಪದ್ಧತಿಯಲ್ಲಿ ಅನೇಕ ಬಗೆಯ ಲಲಿತ ಕಲೆಗಳು ಹಾಸುಹೊಕ್ಕಾಗಿವೆ. ಆದರೆ ಸಾವಿರಾರು ವರ್ಷಗಳಿಂದ ವಿದೇಶಿ ಆಕ್ರಮಣಕಾರರು ನಮ್ಮ ಸಂಸ್ಕೃತಿ, ಪರಂಪರೆ ನಾಶಕ್ಕೆ ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಶ್ರೇಷ್ಠ ಪರಂಪರೆ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಸಂಸ್ಕಾರ ಭಾರತಿ ಉತ್ತರ ಪ್ರಾಂತದ ಪ್ರಧಾನ ಕಾರ್ಯದರ್ಶಿ ಡಾ.ಶಶಿಧರ ನರೇಂದ್ರ ಅಭಿಪ್ರಾಯಪಟ್ಟರು.
ಸಂಸ್ಕಾರ ಭಾರತಿ ಧಾರವಾಡ ಮಹಾನಗರ ವತಿಯಿಂದ ಇಲ್ಲಿನ ಆದರ್ಶ ಬಾಲಿಕಾ ಪ್ರೌಢ ಶಾಲೆ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಮಹಾನಗರ ಪದಾಧಿಕಾರಿಗಳ ಪದ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಸೌಭಾಗ್ಯ ಕುಲಕರ್ಣಿ ಮಾತನಾಡಿ, ನಮ್ಮ ಭಾರತೀಯ ಸಂಸ್ಕೃತಿ ಯಶಸ್ವಿ ಜೀವನಕ್ಕೆ ಅತ್ಯಗತ್ಯ. ಸಂಗೀತದ ಥೆರಪಿಯಿಂದ ನಮ್ಮ ಯಾವುದೇ ಕಾಯಿಲೆ ಗುಣಪಡಿಸುವ ಶಕ್ತಿ ಹೊಂದಿದೆ ಎಂದರು.
ಪ್ರೊ.ಗುಂಡಣ್ಣ ರಾಜವಂಶಿ ಮಾತನಾಡಿದರು. ಪ್ರಸಾದ ಮಡಿವಾಳರ ಸ್ವಾಗತಿಸಿದರು. ಶಿಲ್ಪಾ ಪಾಂಡೆ ನಿರೂಪಿಸಿದರು. ಪ್ರಕಾಶ ಬಾಳಿಕಾಯಿ ವಂದಿಸಿದರು.