

ಮೈಸೂರು: ಚಿತ್ರಕಲೆಗೆ ಉತ್ತೇಜನ ನೀಡಲು ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ ರಾಜ್ಯದ 600 ಕಡೆಗಳಲ್ಲಿ ‘ಆರ್ಟ್ ಸೆಂಟರ್’ ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಪಿ. ಸಂಪತ್ ಕುಮಾರ್ ಹೇಳಿದರು.
ನಗರದ ಚಾಮರಾಜಪುರಂನ ರವಿವರ್ಮ ಆರ್ಟ್ ಇನ್‌ಸ್ಟಿಟ್ಯೂಟ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂಸ್ಥೆಯ ವಿದ್ಯಾರ್ಥಿಗಳ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ‘ಆರ್ಟ್ ಸೆಂಟರ್’ಗಳನ್ನು ಪ್ರಾಯೋಗಿಕವಾಗಿ ಮೈಸೂರು, ಮಂಡ್ಯ, ಹಾಸನ, ಬೆಂಗಳೂರು, ತುಮಕೂರಿನಲ್ಲಿ ಪ್ರಾರಂಭಿಸಿ ನಂತರ ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಪ್ರತಿ ಜಿಲ್ಲೆಯಲ್ಲೂ ಕನಿಷ್ಠ 10 ಆರ್ಟ್ ಸೆಂಟರ್ ತೆರೆಯುವ ಉದ್ದೇಶ ಹೊಂದಲಾಗಿದೆ ಎಂದರು.
ಈ ಆರ್ಟ್ ಸೆಂಟರ್‌ನಲ್ಲಿ ಕಲಾಭಿರುಚಿ ಇರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ತರಬೇತಿ ಕಾರ್ಯಾಗಾರ ನಡೆಸಲಾಗುವುದು. ತಿಂಗಳಿನಲ್ಲಿ ಎರಡು ಕಾರ್ಯಾಗಾರ ನಡೆಸಲು ಉದ್ದೇಶಿಸಲಾಗಿದೆ. ಮಕ್ಕಳಲ್ಲಿ ಸಾಕಷ್ಟು ಹಿಂಜರಿಕೆ, ಭಯ ಇರುತ್ತದೆ. ಭಯ, ಹಿಂಜರಿಕೆಯನ್ನು ಹೋಗಲಾಡಿಸಿ ಅವರನ್ನು ಕಲಾವಿದರಾಗಿ ರೂಪಿಸಲು ಕಾರ್ಯಾಗಾರ ಸಹಕಾರಿಯಾಗಲಿದೆ ಎಂದು ಹೇಳಿದರು.
ಕ್ರೀಡೆ, ನಾಟಕ, ಸಿನಿಮಾಗಳಿಗೆ ಜನರು ಸೇರುತ್ತಾರೆ. ಆದರೆ, ಚಿತ್ರಕಲಾ ಪ್ರದರ್ಶನಕ್ಕೆ ಹೆಚ್ಚು ಜನರು ಸೇರುತ್ತಿಲ್ಲ. ಕಲಾವಿದರಾದ ನಾವು ಜನರೊಂದಿಗೆ ಬೆರೆಯದೆ ಇರುವುದೇ ಇದಕ್ಕೆ ಪ್ರಮುಖ ಕಾರಣ. ಜನರ ಬಳಿಗೆ ಕಲೆಯನ್ನು ಕೊಂಡೊಯ್ಯುವ ಕಾರ್ಯ ಆಗಬೇಕು. ಈ ಹಿನ್ನೆಲೆಯಲ್ಲಿ ಜನ ಸೇರುವ ಜಾಗಗಳಲ್ಲಿ ಚಿತ್ರಕಲಾ ಪ್ರದರ್ಶನ ಏರ್ಪಡಿಸಲು ಉದ್ದೇಶಿಸಲಾಗಿದೆ ಎಂದರು.
ರಾಜ್ಯದಲ್ಲಿರುವ 35 ವರ್ಷದೊಳಗಿನ ಪ್ರತಿಭಾವಂತ ಕಲಾವಿದರನ್ನು ಗುರುತಿಸಿ ಅವರು ರಾಷ್ಟ್ರ ಮಟ್ಟದ ಸ್ಪರ್ಧೆಗೆ ತೆರಳಲು ಬೇಕಾದ ಪೂರಕ ವಾತಾವರಣ ಸೃಷ್ಟಿಸಲು ಯೋಜನೆ ರೂಪಿಸಲಾಗಿದೆ. ರಾಜ್ಯದಲ್ಲಿ ಈ ರೀತಿ ಪ್ರತಿ ವರ್ಷ 10 ಉತ್ತಮ ಕಲಾವಿದರನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದರು.
ವೇದಿಕೆಯಲ್ಲಿ ರವಿವರ್ಮ ಆರ್ಟ್ ಇನ್‌ಸ್ಟಿಟ್ಯೂಟ್ ಪ್ರಾಂಶುಪಾಲ ಶಿವಕುಮಾರ್ ಕೆಸರಮಾಡು, ಚಿತ್ರಕಲಾವಿದರಾದ ಪ್ರಭು ಹರಸೂರ್, ಶ್ರೀನಿವಾಸ್ ಇದ್ದರು.