

ವಿರಾಜಪೇಟೆ: ಸಾಧಿಕ್ ಆರ್ಟ್ ಲಿಂಕ್ಸ್, ಕಲಾ ಉತ್ಸವ ಕೊಡಗು ವತಿಯಿಂದ ನಗರದ ಬ್ರೈಟ್ ಪಬ್ಲಿಕ್ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಂತಾರಾಜ್ಯ ಚಿತ್ರ ಕಲಾವಿದರ ಜಲವರ್ಣ ಚಿತ್ರಕಲಾ ಶಿಬಿರವನ್ನು ಶಾಲೆಯ ಕಾರ್ಯದರ್ಶಿ ಕೆ.ಟಿ. ಬಶೀರ್ ಉದ್ಘಾಟಿಸಿದರು.
ಕೇರಳದ ಹಿರಿಯ ಚಿತ್ರಕಲಾವಿದ ಸತೀಶ್ ಶೈಲಂ ಮಾತನಾಡಿ, ಚಿತ್ರಕಲೆಯು ಸರ್ವಕಾಲಿಕ ಎನ್ನುವುದನ್ನು ನಾವು ಅರಿತಿದ್ದೇವೆ. ಚಿತ್ರಕಲೆಯನ್ನು ಅವಲಂಬಿಸಿ ಜೀವನದಲ್ಲಿ ಸುಧಾರಣೆ ಕಂಡ ಬಹುಮಾನ್ಯರಿದ್ದಾರೆ. ಚಿತ್ರಕಲೆಯಲ್ಲಿ ಹೊಸತನ್ನು ಹುಡುಕಿ ಪ್ರಸ್ತುತಪಡಿಸಿದಲ್ಲಿ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಸಾಧಿಕ್ ಹಂಸ ಅವರು ಕಲಾ ಉತ್ಸವ ಕೊಡಗು ಹೆಸರಿನಲ್ಲಿ ಚಿತ್ರಕಲೆಯನ್ನು ಪ್ರೋತ್ಸಾಹಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದಾರೆ ಎಂದು ಹೇಳಿದರು.
ಹಿರಿಯ ಚಿತ್ರಕಲಾವಿದ, ಶಿಕ್ಷಕ ಬಿ.ಆರ್.ಸತೀಶ್ ಮಾತನಾಡಿ, ಶಿಬಿರಗಳ ಆಯೋಜನೆಯಿಂದ ಚಿತ್ರಕಲಾವಿದರ ಸಮಾಗಮವಾಗುತ್ತದೆ. ಚಿತ್ರಕಲೆಯ ಮೂಲಕ ತಮ್ಮ ಅಭಿವ್ಯಕ್ತಿ, ಅಭಿರುಚಿ, ಚಿತ್ರದಲ್ಲಿ ಅಳವಡಿಸುವ ವರ್ಣಗಳ ಹೊಂದಾಣಿಕೆ ಹೀಗೆ ಹತ್ತು ಹಲವು ಕಲಿಯುವ ಮನಸ್ಸು ಬರುತ್ತದೆ. ಕಲೆಗಾರನಿಗೆ ಏಕಾಗ್ರತೆ ದೊರಕುವಂತಾಗುತ್ತದೆ. ಇಲ್ಲಿ ವರ್ಣಗಳು ಮಾತನಾಡುತ್ತದೆ. ಕುಂಚವು ತನ್ನ ಕರ್ತವ್ಯ ನಿರ್ವಹಿಸುತ್ತದೆ. ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದ ವ್ಯಕ್ತಿ ಪೂರ್ಣಗತವಾಗಿ ತೊಡಗಿಸಿಕೊಂಡರೆ ಉತ್ತಮ ಭವಿಷ್ಯ ನಿರ್ಮಾಣ ಮಾಡಬಹುದಾಗಿದೆ ಎಂದರು.
ಕೇರಳ ಚಿತ್ರಕಲಾ ಪರಿಷತ್ತು ಸದಸ್ಯರಾದ ಬಿಜು ಜೇನ್, ವಡಗರ ಕೊಲಕಯಿಲ್, ಕಲ್ಕಿ ಚಲನಚಿತ್ರದ ಕಲಾ ನಿರ್ದೇಶಕ ಶಿಂಜಿತ್ ಕುಮಾರ್, ಕಣ್ಣೂರು ಸಂತೋಷ ಚುಂಡಾ, ತಲಚೇರಿ ಸುಶಾಂತ್ ಕೊಲ್ಲವೆರಿಕಲ್, ಕೊಡಗು ಜಿಲ್ಲೆ ಯ ರೂಪೇಶ್ ನಾಣಯ್ಯ, ಕೊಂಡಂಗೇರಿ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ಸುಲೈಮಾನ್ ಕೊಂಡಂಗೇರಿ, ಅಮ್ಮತ್ತಿ ಗ್ರಾಮದ ಶಮೀತ ದಿನೇಶ್, ಎಂ.ವಿ.ರಂಜು ಇರಿಟ್ಟಿ ಇತರರು ಇದ್ದರು.
ಶಿಬಿರದಲ್ಲಿ ಜಿಲ್ಲೆ ಹಾಗೂ ಕೇರಳ ರಾಜ್ಯದ ವಿವಿಧ ಭಾಗಗಳಿಂದ 16 ಮಂದಿ ಚಿತ್ರಕಲಾವಿದರು ಭಾಗವಹಿಸಿ ಜಲವರ್ಣದ ಮೂಲಕ ಚಿತ್ರ ರಚನೆ ಮಾಡಿದರು. ಶಿಬಿರದಲ್ಲಿ ಭಾಗವಹಿಸಿದ ಚಿತ್ರಕಲಾವಿದರಿಗೆ ಪ್ರಶಸ್ತಿ ಪ್ರಮಾಣ ಪತ್ರ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಜಪಾನ್ ದೇಶದಲ್ಲಿ ಅನಿಮೇಷನ್ ಕ್ಷೇತ್ರದಲ್ಲಿ ಮೂರು ವರ್ಷಗಳ ಸೇವೆಯ ನಂತರ ಇರಿಟ್ಟಿಯ ಗ್ರಾಮದಲ್ಲಿ ಕಲಾ ಸೇವೆ ಮಾಡುತ್ತಿರುವ ಎಂ.ವಿ.ರಂಜು ಮತ್ತು ಅನಗಾ ದಂಪತಿ ಪುತ್ರಿ ಎರಡೂವರೆ ವರ್ಷದ ಆಗ್ನಿಕಾ ರಂಜು ಹಾಳೆಯಲ್ಲಿ ಜಲವರ್ಣದ ಮೂಲಕ ಪುಟ್ಟ ಮನದ ಭಾವನೆಯನ್ನು ಅನಾವರಣ ಮಾಡಿದಳು. ಇವಳ ಪ್ರತಿಭೆಯನ್ನು ಗುರುತಿಸಿ ಕಣ್ಣೂರು ಜಿಲ್ಲಾಡಳಿತವು ಅತಿ ಕಿರಿಯ ಚಿತ್ರಕಲಾವಿದೆ ಎಂದು ಗುರುತಿಸಿ ಗೌರವಿಸಿದೆ ಎಂದು ರಂಜು ಹೆಮ್ಮೆಯಿಂದ ಹೇಳಿದರು.ಸಾಧೀಕ್ ಆರ್ಟ್ ಲಿಂಕ್ಸ್ ವಿರಾಜಪೇಟೆ, ಕಲಾ ಉತ್ಸವ ಕೊಡಗು ವತಿಯಿಂದ ಆಯೋಜಿಸಿದ್ದ ಶಿಬಿರದಲ್ಲಿ ಮೂಡಿದ ಚಿತ್ರಗಳು.