ನಾಟಕದಿಂದ ಸಹಜ ಅಭಿನಯಕ್ಕೆ ಅವಕಾಶ

06 HNL
Published on

ಹೊನ್ನಾಳಿ: ನಾಟಕಗಳು ಸಹಜ ಅಭಿನಯಕ್ಕೆ ಅವಕಾಶ ಕಲ್ಪಿಸುತ್ತದೆ. ನಾಟಕ ಸಾಹಿತಿಗಳು ದ್ವಂದ್ವಾರ್ಥಕ್ಕೆ ಒತ್ತು ಕೊಡದೆ ಕುಟುಂಬ ಸಮೇತ ನಾಟಕ ನೋಡಲು ಪ್ರೇರಣೆ ನೀಡುತ್ತಿದೆ ಎಂದು ಅಭಿವ್ಯಕ್ತಿ ಕಲಾ ಸಂಘದ ಪರಮೇಶ್ ಪಟ್ಟಣಶೆಟ್ಟಿ ತಿಳಿಸಿದರು.

ಪಟ್ಟಣದ ಕನಕದಾಸ ರಂಗಮಂದಿರದಲ್ಲಿ ಬುಧವಾರ ಅಭಿವ್ಯಕ್ತಿ ಕಲಾ ಸಂಘದಿಂದ ಹಮ್ಮಿಕೊಂಡಿದ್ದ ಮೂರು ದಿನಗಳ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದರು.

ನಾಟಕವನ್ನು ಕೇವಲ ಮನರಂಜನೆಗಾಗಿ ನೋಡದೆ ಆ ಕಲೆಯನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಈ ಮೂಲಕ ನಾಟಕ ಸಾಹಿತ್ಯ ಜೀವಂತವಾಗಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಯುವಕರು ಮೊಬೈಲ್ ಬಳಕೆಯಿಂದ ನಾಟಕದ ಬಗೆಗಿನ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ ಎಂದರು.

ಆಧುನಿಕತೆಯ ಭರಾಟೆಯಲ್ಲಿ ನಾಟಕ ಕಂಪನಿಗಳು ಮುಚ್ಚುತ್ತಿವೆ, ಆದರೆ ಹೊನ್ನಾಳಿಯಲ್ಲಿ ನಾಟಕವನ್ನು ನೋಡುವ ಹವ್ಯಾಸವನ್ನಿಟ್ಟುಕೊಂಡಿರುವುದು ಸಂತಸ. ಈ ಕಲೆಯನ್ನು ಜೀವಂತವಾಗಿಡಲೂ ಎಲ್ಲರೂ ನಾಟಕ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದರು.

ನಾಟಕಕಾರ ಹಾಗೂ ಸಾಹಿತಿ ಪ್ರೇಮಕುಮಾರ ಬಂಡಿಗಡಿ ಮಾತನಾಡಿ, ಯುವ ಪೀಳಿಗೆ ನಾಟಕಗಳಿಂದ ಕಲಿಯಬೇಕಾದುದು ಸಾಕಷ್ಟಿದೆ. ಯುವಕರು ನಾಟಕ ಎಂದು ತಾತ್ಸಾರ ಮಾಡದೇ ಬಿಡುವಿನ ವೇಳೆಯಲ್ಲಿ ಮೊಬೈಲ್ ಬಿಟ್ಟು ನಾಟಕ ನೋಡಿ, ಆಗ ಜೀವನ ಅರ್ಥವಾಗುತ್ತದೆ. ನಮ್ಮನ್ನು ರಂಜಿಸಲು ಹಾಗೂ ಕಲೆಯನ್ನು ಉಳಿಸಲು ಕಲಾವಿದರು ಶ್ರಮಿಸುತ್ತಿದ್ದಾರೆ. ಅಂತಹ ಕಲಾವಿದರಿಗೆ ಗೌರವ ನೀಡಲು ನಾಟಕವನ್ನು ನೋಡಬೇಕು ಎಂದರು.

ಅಭಿವ್ಯಕ್ತಿ ಕಲಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸತ್ತಿಗೆ ಲೋಕೇಶ್ ಮಾತನಾಡಿದರು.

ಹಿರಿಯ ರಂಗಕರ್ವಿು ಬೆನಕಯ್ಯ ಅವರನ್ನು ಅಭಿವ್ಯಕ್ತಿ ಕಲಾ ಸಂಘದಿಂದ ಸನ್ಮಾನಿಸಲಾಯಿತು. ಮಂಗಳವಾರ ರಾತ್ರಿ ಧಾತ್ರಿ ರಂಗ ಸಂಸ್ಥೆಯಿಂದ ವಿ.ಎನ್. ಅಶ್ವಥ್ ಅವರ ರಚನೆಯ ದಾವಣಗೆರೆಯ ಎಚ್.ಎನ್. ಭೀಮೇಶ್ ಅವರ ನಿರ್ದೇಶನದ ಶ್ರೀ ಕೃಷ್ಣ ಸಂಧಾನ ನಗೆ ನಾಟಕ ನಡೆಯಿತು.

ವೇದಿಕೆಯಲ್ಲಿ ಅಭಿವ್ಯಕ್ತಿ ಕಲಾ ಸಂಸ್ಥೆಯ ಪ್ರಮುಖರಾದ ಕೆ.ವಿ. ಚನ್ನಪ್ಪ, ಕತ್ತಿಗೆ ನಾಗರಾಜು, ವಕೀಲ ಚಂದ್ರಪ್ಪ ಮಡಿವಾಳ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net