ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಕಲೆ ಮತ್ತು ಸಂಸ್ಕೃತಿ ಸಹಕಾರಿ

MDK01
Published on

ಮಡಿಕೇರಿ: ವಿದ್ಯಾರ್ಥಿಗಳು ಕಲೆ ಮತ್ತು ಸಂಸ್ಕೃತಿಗಳನ್ನು ಬೆಳೆಸಿಕೊಳ್ಳುವುದರ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು ಎಂದು ಸಂಪಾಜೆಯ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಹ ಶಿಕ್ಷಕ ಎಚ್.ಜಿ.ಕುಮಾರ್ ಕರೆ ನೀಡಿದರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಂಪಾಜೆ ಪದವಿ ಪೂರ್ವ ಕಾಲೇಜಿನಲ್ಲಿ ಚಿಗುರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.


ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳೊಂದಿಗೆ ಕಲಿಕಾ ಚಟುವಟಿಕೆಗಳನ್ನು ಸಮ್ಮಿಳಿತಗೊಳಿಸಿದಾಗ ಏಕಾಗ್ರತೆ ವೃದ್ಧಿಸುತ್ತದೆ. ಹೊಸ ಶಿಕ್ಷಣ ನೀತಿಯ ಆಶಯವೇ ವಿದ್ಯಾರ್ಥಿಗಳಲ್ಲಿ ಸಮಗ್ರ ಸಾಮರ್ಥ್ಯಗಳನ್ನು ಅಂತರ್ಗತಗೊಳಿಸುವುದು. ನೃತ್ಯ, ಏಕಾಪಾತ್ರಭಿನಯ, ಚಿತ್ರಕಲೆ, ಸಂಗೀತ, ರಂಗೋಲಿ, ನಾಟಕ ಹೀಗೆ ಅನೇಕ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಕೌಶಲ್ಯಗಳನ್ನು ಹೊಂದುವುದರ ಮೂಲಕ ಉತ್ತಮ ಭವಿಷ್ಯ ರೂಢಿಸಿಕೊಳ್ಳಬಹುದು ಎಂದು ಕರೆ ನೀಡಿದರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಲ್ಲಿ ಅಗಾಧವಾದ ವಿವಿಧ ರೀತಿಯ ಪ್ರತಿಭಾ ಸಾಮರ್ಥ್ಯವಿದೆ. ಮಕ್ಕಳಲ್ಲಿ ಅಡಗಿರುವ ಪ್ರತಿಭಾ ಸಾಮರ್ಥ್ಯವನ್ನು ಹೊರತರಲು ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ೭ ರಿಂದ ೧೪ ವರ್ಷದೊಳಗಿನ ಪ್ರತಿಭಾವಂತ ಮಕ್ಕಳ ಸಾಂಸ್ಕೃತಿಕ ಚಟುವಟಿಕೆಗೆ ಸಹಕಾರಿ ಆಗುವಲ್ಲಿ ಚಿಗುರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನುಡಿದರು.


ಕಾಲೇಜಿನ ಪ್ರಾಂಶುಪಾಲೆ ವೈ.ಕೆ.ಮಾಲತಿ, ಚೆಂಬು ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ನಂಬಿಯಾರ್, ಮುಖ್ಯ ಶಿಕ್ಷಕ ಐತಪ್ಪ, ಸಂಸ್ಥೆಯ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.


ಬೇರೆ ಬೇರೆ ಊರುಗಳಿಂದ ಆಗಮಿಸಿದ ವಿದ್ಯಾರ್ಥಿಗಳ ಸುಗಮ ಸಂಗೀತ, ಜಾನಪದ ಹಾಡುಗಳು, ವಿವಿಧ ಸಂಗೀತ ಪರಿಕರಗಳನ್ನು ನುಡಿಸುವಿಕೆ, ಸಂಪಾಜೆ ಪ್ರೌಢಶಾಲೆಯ ವಿದ್ಯಾರ್ಥಿಗಳ ಜಾನಪದ ನೃತ್ಯಗಳು ಪ್ರೇಕ್ಷಕರ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net