ಕಲೆ,ಸಂಸ್ಕೃತಿ ಉಳಿಸಿ ಬೆಳೆಸುವ ಹೊಣೆ ಯುವಜನರ ಮೇಲಿದೆ

Published on

ಚಿತ್ರದುರ್ಗ: ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಹೊಣೆ ಯುವಜನರ ಮೇಲಿದೆ ಎಂದು ಹಿರಿಯೂರು ಆದಿಜಾಂಬವ ಕೋಡಿಹಳ್ಳಿ ಬೃಹನ್ಮಠದ ಶ್ರೀ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಜಿಲ್ಲಾಆಡಳಿತ,ಜಿಪಂ,ಕ್ರೀಡಾ ಇಲಾಖೆ ಹಾಗೂ ಯುವ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ನಗರದ ಕ್ರೀಡಾಭವನ ದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಕಲಿಕೆ ಮತ್ತು ದುಡಿಮೆ ನಡುವೆ ಮನಸಿಗೆ ಖುಷಿ,ಹಿತವನ್ನು ಹಾಗೂ ಬದುಕಿಗೆ ಆತ್ಮ ವಿಶ್ವಾಸವನ್ನು ನೀಡುವಂಥ ನಾನಾ ಕಲಾ ಪ್ರಕಾರಗಳನ್ನು ಅಭ್ಯಾಸ ಮಾಡ ಬೇಕು.

ಇಂಥ ಕಾರ‌್ಯಕ್ರಮಗಳು ಕಲಾವಿದರಿಗೆ ಉತ್ತಮ ವೇದಿಕೆಯನ್ನು ಒದಗಿಸುತ್ತವೆ. ವಿಶೇಷವಾಗಿ ಗ್ರಾಮೀಣ ಭಾಗದ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಇಂಥ ಉತ್ಸವಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಸಾಧನೆಗಳನ್ನು ಒರೆಗೆ ಹಚ್ಚ ಬೇಕೆಂದು ಶ್ರೀಗಳು ಹೇಳಿದರು.

ಎನ್‌ಎಸ್‌ಎಸ್ ನೋಡಲ್ ಅಧಿಕಾರಿ ಕೆ.ಲೋಕೇಶ್‌ನಾಯ್ಕ ಮಾತನಾಡಿ,ಕಲೆ,ಕ್ರೀಡೆ ಮತ್ತಿತರ ಕ್ಷೇತ್ರಗಳಲ್ಲಿ ಸಾಧಿಸಬೇಕು ಎಂದಾದರೆ ಅದಕ್ಕೆ ಆಸಕ್ತಿ ಮತ್ತು ಪರಿಶ್ರಮ ಅಗತ್ಯ. ಪ್ರತಿಭಾ ಪ್ರದರ್ಶನಕ್ಕೂ ಇಂಥ ಉತ್ಸವಗಳು ಯುವಜನರಿಗೆ ಸಹಕಾರಿಯಾಗುತ್ತವೆ ಎಂದರು.

ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಯಲಕ್ಷ್ಮೀಬಾಯಿ,ದ್ವಾರಕನಾಥ್,ಸವಿತಾ,ರಾಜ್ಯಯುವ ಪ್ರಶಸ್ತಿ ಪುರಸ್ಕೃತರಾದ ಚಿತ್ತಪ್ಪ, ವೆಂಕಟೇಶ್‌ಪ್ರಸಾದ್,ಶ್ರೀನಿವಾಸ್‌ಮಳಲಿ,ಕುಮಾರ್ ಮತ್ತಿತರರು ಇದ್ದರು. ಈ ವೇಳೆ ರಾಷ್ಟ್ರ ಮತ್ತು ರಾಜ್ಯಯುವ ಪ್ರಶಸ್ತಿಗೆ ಭಾಜನರಾದ ಯುವ ಜನರನ್ನು ಗೌರವಿಸಲಾಯಿತು.

-----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net