

ಮಂಡ್ಯ: ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಎಆರ್‌ಎಸ್‌ಐ ನಾಗರಾಜು(51) ಬುಧವಾರ ತರಬೇತಿ ಅವಧಿಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೃತರ ಅಂತ್ಯಕ್ರಿಯೆ ಸರ್ಕಾರಿ ಗೌರವದೊಂದಿಗೆ ಗುರುವಾರ ಸ್ವಗ್ರಾಮ ಬಸರಾಳಿನಲ್ಲಿ ನೆರವೇರಿತು.
ಹಲವು ವರ್ಷ ಪೊಲೀಸ್ ಜೀಪ್ ಚಾಲಕರಾಗಿ ಕೆಲಸ ನಿರ್ವಹಿಸಿದ್ದ ನಾಗರಾಜು ಅವರಿಗೆ ಇತ್ತೀಚೆಗೆ ಎಆರ್‌ಎಸ್‌ಐ ಆಗಿ ಪದೋನ್ನತಿ ಹೊಂದಿದ್ದರು. ಅದರಂತೆ ಬೆಂಗಳೂರಿನ ಯಲಹಂಕದಲ್ಲಿ 10 ದಿನದ ಪುನರ್ ಮನನ ತರಬೇತಿಯಲ್ಲಿ ಪಾಲ್ಗೊಂಡಿದ್ದರು. ಏಳನೇ ದಿನದ ತರಬೇತಿ ಅವಧಿಯಲ್ಲಿ ಮಧ್ಯಾಹ್ನ ಊಟ ಮಾಡುವ ವೇಳೆ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಪೊಲೀಸ್ ಇಲಾಖೆಯ ನಿಯಮದಂತೆ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಅಂತ್ಯಸಂಸ್ಕಾರಕ್ಕೆ ಗೌರವ ಸಲ್ಲಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಡಿವೈಎಸ್ಪಿ ಶಿವಮೂರ್ತಿ, ಬಸರಾಳು ಪಿಎಸ್‌ಐ ಶೇಷಾದ್ರಿಕುಮಾರ್ ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು.