

ಅರಸೀಕೆರೆ: ಶಾಶ್ವತ ಬರವನ್ನೇ ಹಾಸಿ, ಹೊದ್ದು ಮಲಗಿರುವ ತಾಲೂಕನ್ನು ಸರ್ಕಾರ ಕಡೆಗೂ ತೀವ್ರ ಬರಪೀಡಿತ ಪಟ್ಟಿಯಲ್ಲಿ ಸೇರಿಸಿದ್ದು, ಅನ್ನದಾತರನ್ನು ಕೊಂಚ ನಿರಾಳರನ್ನಾಗಿಸಿದೆ.
ಇದಕ್ಕೆ ಪೂರಕ ಎನ್ನುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಸೋಮವಾರ ಕಸ್ತೂರ ಬಾ ಸೇವಾಶ್ರಮದ ಆವರಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಜನಸಂಪರ್ಕ ಸಭೆಯಲ್ಲಿ ಶೀಘ್ರ ಬರ ಪರಿಹಾರ ಕಾಮಗಾರಿ ಆರಂಭಿಸುವ ಭರವಸೆ ನೀಡಿರುವುದು ರೈತಾಪಿ ವರ್ಗದಲ್ಲಿ ಸಂತಸವನ್ನುಂಟು ಮಾಡಿದೆ.
ಆಗಸ್ಟ್ ಹಾಗೂ ಸೆಪ್ಟಂಬರ್ ಅಂತ್ಯದ ವೇಳೆಗೆ ಅಲ್ಲಲ್ಲಿ ವಾಡಿಕೆ ಮಳೆಯಾಗಿದೆ. ಆದರೆ ಅಕ್ಟೋಬರ್ ಎರಡನೇ ವಾರಾಂತ್ಯದ ವೇಳೆಗೆ ನಿರೀಕ್ಷಿತ ಮಳೆ ಆಗಿಲ್ಲ.ಇದರಿಂದಾಗಿ ಬಾಣಾವರ, ಜಾವಗಲ್,ಕಣಕಟ್ಟೆ ಹಾಗೂ ಕಸಬಾ ಹೋಬಳಿ ವ್ಯಾಪ್ತಿಯ ಸಹಸ್ರಾರು ಎಕರೆ ಜಮೀನಿನಲ್ಲಿ ಬಿತ್ತನೆಯಾಗಿರುವ ಬೆಳೆಗಳು ಬತ್ತಿ ಬಡಗಲಾಗಿದ್ದು ಅನ್ನದಾತನ ಬದುಕು ಬಾಣಾಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ಕೃಷಿ ಇಲಾಖೆ ಅಧಿಕಾರಿಗಳು ನೀಡಿರುವ ಮಾಹಿತಿ ಅನುಸಾರ ಗಂಡಸಿ 6250 , ಬಾಣಾವರ 6300, ಕಸಬಾ 7000, ಜಾವಗಲ್ 8200 ಸೇರಿ ಕಣಕಟ್ಟೆ 7800 ಸೇರಿ 35,550 ಹೆಕ್ಟೇರ್ ರಾಗಿ ಇನ್ನುಳಿದಂತೆ ತೊಗರಿ 250 ಹಾಗೂ 8,800 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಇದೀಗ ಬಹುತೇಕ ಬೆಳೆಗಳು ಮಳೆಯಿಲ್ಲದೆ ಒಣಗಲಾರಂಭಿಸಿವೆ. ಇದರಿಂದಾಗಿ ಫಸಲು ಕೈಗೆ ಬಂದ ತುತ್ತು ಬಾಯಿಗಿಲ್ಲ ಎನ್ನುವಂತಾ ಗಿದೆ ರೈತರ ಸ್ಥಿತಿ. ಹಲವೆಡೆ ಈಗಾಗಲೇ ಜಾನುವಾರುಗಳ ಮೇವಿಗೂ ತತ್ವಾರ ಎದುರಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಸತತ ಮಳೆ ಕೊರತೆಯಿಂದಾಗಿ ಮುಸುಕಿನ ಜೋಳ, ಅಲಸಂದೆ, ಉದ್ದು, ಮೇವಿನ ಜೋಳ, ಹುರುಳಿ, ಸಾಮೆ, ನವಣೆಯಂತಹ ಸಿರಿಧಾನ್ಯಗಳ ಬಿತ್ತನೆಗೂ ಹಿನ್ನಡೆಯಾಗಿದೆ. ಅಲ್ಲದೆ ಕಳೆದ ವರ್ಷ ಸುರಿದಿದ್ದ ಬಾರಿ ಮಳೆಗೆ ಭರ್ತಿಯಾಗಿದ್ದ ಬಹುತೇಕ ಕೆರೆಗಳಲ್ಲಿ ಬಿಸಿಲಿನ ಝಳಕ್ಕೆ ನೀರಿನ ಸಂಗ್ರಹ ಸದ್ದಿಲ್ಲದೆ ಕುಸಿತವಾಗತೊಡಗಿದ್ದು ಅಂತರ್ಜಲ ಪಾತಳಕ್ಕೆ ಕುಸಿಯುವ ಭೀತಿ ಎದುರಾಗಿದೆ. ಚಿತ್ತ ಮಳೆ ಎತ್ತಿಂದಾ ದರೂ ಸೈ ಎನ್ನುವ ನಾಣ್ಣುಡಿ ಹುಸಿಯಾಗುವ ಲಕ್ಷಣ ಗೋಚರಿಸುತ್ತಿದೆ. ಮೂರ‌್ನಾಲ್ಕು ದಿನದಲ್ಲಿ ವರುಣ ಕೃಪೆ ತೋರದಿದ್ದಲ್ಲಿ ಜನ, ಜಾನುವಾರುಗಳನ್ನು ಭಗವಂತನೂ ರಕ್ಷಿಸಲಾರ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಸರ್ಕಾರ ಇದೀಗ ತಾಲೂಕನ್ನು ತೀವ್ರ ಬರಪೀಡಿತ ಪಟ್ಟಿಗೆ ಸೇರಿಸಿರುವ ಹಿನ್ನಲೆಯಲ್ಲಿ ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ತೋಟಗಾರಿಕೆ ಸೇರಿ ವಿವಿಧ ಇಲಾಖೆಗಳ ವತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ದುಡಿಯುವ ಕೈಗಳಿಗೆ ಕೆಲಸ ಲಭಿಸಲಿದೆ. ಹೊಲ, ಗದ್ದೆಗಳಲ್ಲಿ ಉದು, ಬದು ಹಾಕುವುದು, ಕೃಷಿ ಹೊಂಡಗಳ ನಿರ್ಮಾಣಕ್ಕೆ ಅದ್ಯತೆ ದೊರೆಯಲಿದೆ. ಬಿತ್ತನೆಯಾಗಿರುವ ಬೆಳೆ ವೈಫಲ್ಯಕ್ಕೆ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಸಬ್ಸಿಡಿ ದೊರೆಯಲಿದೆ. ಪರಿಹಾರದ ಮೊತ್ತ ರೈತನ ಖಾತೆಗೆ ಜಮೆಯಾಗಲಿದ್ದು ಕೃಷಿ ಚಟುವಟಿಕೆಗೆ ಮಾಡಿದ್ದ ಸಾಲಾ ತೀರಿಸಲು ನೆರವಾಗಲಿದೆ.
ಮಳೆ ಕೊರತೆಯಿಂದಾಗಿ ರೈತನಿಗೆ ಸಂಕಷ್ಟ ಎದುರಾಗಿದೆ. ವಾಸ್ತವ ಅರಿತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅರಸೀಕೆರೆ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸಿದ್ದಾರೆ. ಜನರ ಸಂಕಷ್ಟ ಪರಿಹರಿಸುವ ದೃಷ್ಟಿಯಿಂದ ಶೀಘ್ರವೇ ಬರಪೀಡಿತ ತಾಲೂಕುಗಳಲ್ಲಿ ಪರಿಹಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಅನ್ನದಾತನ ಹಿತ ಕಾಯಲು ಸರ್ಕಾರ ಬದ್ಧವಿದೆ.
ಕೆ.ಎನ್.ರಾಜಣ್ಣ, ಜಿಲ್ಲಾ ಉಸ್ತುವಾರಿ ಸಚಿವ
ಸರ್ಕಾರ ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸಿದರೆ ಸಾಲದು. ಬದಲಾಗಿ ಅನ್ನದಾತ ಗುಳೆ ಹೋಗುವುದನ್ನು ತಪ್ಪಿಸಲು ಯೋಜನೆ ರೂಪಿಸಬೇಕು. ರಾಷ್ಟ್ರೀಕೃತ ಹಾಗೂ ಸಹಕಾರ ಸಂಘಗಳಲ್ಲಿ ಮಾಡಿರುವ ಸಾಲ ಮನ್ನಾ ಮಾಡುವ ಮೂಲಕ ನೆರವಿಗೆ ಧಾವಿಸಬೇಕು. ವಿಮಾ ಕಂತು ಪಾವತಿಸಿರುವ ರೈತನ ಖಾತೆಗೆ ಪರಿಹಾರದ ಮೊತ್ತವನ್ನು ತಕ್ಷಣವೇ ಪಾವತಿಸಬೇಕು.
ಕೊಂಡೇನಾಳು ಪ್ರಸನ್ನ, ರೈತ ಮುಖಂಡ, ಗಂಡಸಿ ಹೋಬಳಿ
ತಾಲೂಕಿನ ವಿವಿಧ ಹೋಬಳಿ ವ್ಯಾಪ್ತಿಯಲ್ಲಿ ಅಂದಾಜು 35,550 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆ ಮಾಡಲಾಗಿದೆ. ಜತೆಗೆ ಮುಸುಕಿನ ಜೋಳ, ತೊಗರಿ, ಮುಸುಕಿನ ಜೋಳ ಸೇರಿ ಹಲವು ಬೆಳೆಗಳು ಬಾಡಲಾರಂಭಿಸಿದ್ದು, ಪ್ರಸಕ್ತ ಸಾಲಿನಲ್ಲಿ 30 ಸಾವಿರ ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ಅಕ್ಟೋಬರ್ ಎರಡನೇ ವಾರದಲ್ಲಿ ಮಳೆ ಕಣ್ಣಾಮುಚ್ಚಾಲೆ ಮುಂದುವರಿದ್ದು, ಮುರ‌್ನಾಲ್ಕು ದಿನದಲ್ಲಿ ವರುಣ ಕೃಪೆ ತೋರದಿದ್ದಲ್ಲಿ ಫಸಲು ಕೈತಪ್ಪುವ ಸಾಧ್ಯತೆಯಿದೆ.
ಎ.ಪಿ.ಶಿವಕುಮಾರ್ ಸಹಾಯಕ ನಿರ್ದೇಶಕ, ಕೃಷಿ ಇಲಾಖೆ, ಅರಸೀಕೆರೆ
ಕೇಂದ್ರ ಸರ್ಕಾರದ ಅವೈಜ್ಞಾನಿಕ ಮಾರ್ಗಸೂಚಿಗಳ ಕಾರಣದಿಂದಾಗಿ ತಾಲೂಕನ್ನು ಬರಪೀಡಿತ ಮೊದಲ ಪಟ್ಟಿಯಲ್ಲಿ ಸೇರಿಸಲು ಸಾಧ್ಯವಾಗಿ ರಲಿಲ್ಲ. ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಹಾಗೂ ನನ್ನ ಪ್ರಯತ್ನದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಬರಪೀಡಿತ ಪಟ್ಟಿಗೆ ಸೇರಿಸಿದ್ದಾರೆ. ಶೀಘ್ರ ಬರಪರಿಹಾರ ಕಾಮಗಾರಿಗಳು ಆರಂಭವಾಗಲಿದ್ದು, ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು.
ಕೆ.ಎಂ.ಶಿವಲಿಂಗೇಗೌಡ ಶಾಸಕ