ಸಿಎಂ ಬಸವರಾಜ ಬೊಮ್ಮಾಯಿ ಆಗಮನ - ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

Vijayapur
1) ವಿಜಯಪುರ ನಗರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸ್ವಾಗತಕ್ಕೆ ಆಹ್ವಾನಿಸುತ್ತಿರುವ ಕಮಾನುಗಳು. 2) ವಿಜಯಪುರ ನಗರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆಯಿಂದ ರಸ್ತೆಗೆ ಮಣ್ಣು ಹಾಕಿ ಗುಂಡಿ ಮುಚ್ಚುತ್ತಿರುವುದು. 3) ವಿಜಯಪುರ ಹೊರವಲಯದಲ್ಲಿರುವ ಎಸ್.ಹೈಪರ್‌ಮಾರ್ಟ್ ಬಳಿ ನಡೆಯಲಿರುವ ಸಿದ್ದೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ ವೇದಿಕೆ ಕಾರ್ಯಕ್ರಮಕ್ಕೆ ಕುರ್ಚಿ ಹಾಕುತ್ತಿರುವುದು.
Published on

ವಿಜಯಪುರ: ಬರದನಾಡು ವಿಜಯಪುರ ಜಿಲ್ಲೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮನದ ಹಿನ್ನೆಲೆಯಲ್ಲಿ ಗುಮ್ಮಟನಗರಿಯಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಯಿತು. ಸೆ.30ರಂದು ಜಿಲ್ಲೆಗೆ ಆಗಮಿಸುತ್ತಿರುವ ನಾಡಿದ ದೊರೆಯ ಸ್ವಾಗತಕ್ಕೆ ವಿಜಯಪುರ ನಗರದಲ್ಲಿ ರಸ್ತೆ ಕಾಮಗಾರಿ ಸೇರಿದಂತೆ ವಿವಿಧ ಕಾರ್ಯಗಳು ಚುರುಕಿನಿಂದ ನಡೆದಿದ್ದು ಎಲ್ಲರ ಗಮನ ಸೆಳೆಯಿತು. ವಿಜಯಪುರ ನಗರ ವಿಧಾನ ಸಭಾ ಕ್ಷೇತ್ರದಲ್ಲಿ ಸಿಎಂ ಬೊಮ್ಮಾಯಿ ಅವರು, 500 ಕೋಟಿ ರೂ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದು, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಭಿವೃದ್ಧಿಯ ಮುನ್ನುಡಿ ಬರೆದಿದ್ದಾರೆ.

ನೇರಮಾತಿನ ನಾಯಕ ಎಂಬ ಬಿರುದಿನ ಜೊತೆಗೆ ಅಭಿವೃದ್ಧಿಯ ಹರಿಕಾರ ಎಂಬ ಬಿರುದನ್ನು ಅಭಿಮಾನಿಗಳಿಂದ ಪಡೆದಿರುವ ಹಿಂದುಹುಲಿ ವಿಜಯಪುರ ನಗರದ ಅಭಿವೃದ್ಧಿ ಕನಸು ಸಾಕಾರಗೊಳಿಸುತ್ತಾ ಮುನ್ನಡೆಯುತ್ತಿದ್ದಾರೆ. ಬಡವರಿಗೆ ಅನುಕೂಲ ಕಲ್ಪಿಸುವ ಶ್ರೀ ಸಿದ್ದೇಶ್ವರ ಸ್ವಾಮೀಜಿ ಹೈಟೆಕ್ ಆಸ್ಪತ್ರೆ, ವಿಜಯಪುರ ನಗರದ ಸುಸಜ್ಜಿತ ರಸ್ತೆ ಸೇರಿದಂತೆ ಹಲವಾರು ಕಾಮಗಾರಿಗಳಿಗೆ ಸಿಎಂ ಬೊಮ್ಮಾಯಿ ಲೋಕಾರ್ಪಣೆ ಮಾಡಲಿದ್ದಾರೆ. ಬಡವರಿಗೆ ಆಶ್ರಯ ಮನೆಯ ಹಂಚಿಕೆಯಲ್ಲಿ ಸರ್ಕಾರಕ್ಕೆ ಸಂದಾಯವಾಗಬೇಕಾದ ಹಣದಲ್ಲಿ ರಿಯಾಯ್ತಿ, ಕಡಿಮೆ ದರದಲ್ಲಿ ಡಯಾಲಿಸಿಸ್, ಕಡಿಮೆ ದರದಲ್ಲಿ ಔಷಧ ಹೀಗೆ ಅನೇಕ ಸಾಮಾಜಿಕ ಚಟುವಟಿಕೆಯ ಮೂಲಕ ಬಡವರ ಸ್ನೇಹಿಯಾಗಿ, ಬಡವರ ಬಂಧುವಾಗಿ ಯತ್ನಾಳ ಸಾಮಾಜಿಕವಾಗಿಯೂ ಸೇವಾ ಕೈಂಕರ್ಯವನ್ನು ಯತ್ನಾಳರು ಮೊಳಗಿಸಿರುದ್ದಾರೆ.

ಪ್ರಗತಿಯ ಶುಭಾರಂಭ: ವಿಜಯಪುರ ನಗರದಲ್ಲಿ ಶಾಸಕ ಯತ್ನಾಳ ಅವರ ಪರಿಶ್ರಮದಿಂದಾಗಿ ಪ್ರಗತಿಯ ಶುಭಾರಂಭ ಕಂಡಿದ್ದು, ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಮುನ್ನುಡಿ ಬರೆದಿದ್ದಾರೆ. ಕೋಟಿ ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳು ಅನುಷ್ಠಾನ ಹಂತದಲ್ಲಿವೆ. ಲೋಕೋಪಯೋಗಿ, ಮಹಾನಗರ ಪಾಲಿಕೆ, ಪ್ರವಾಸೋದ್ಯಮ ಇಲಾಖೆ ಹೀಗೆ ಅನೇಕ ಇಲಾಖೆಗಳಲ್ಲಿ ಕೋಟ್ಯಂತರ ರೂ. ಅನುದಾನದಲ್ಲಿ ವಿವಿಧ ಪ್ರಗತಿಯ ಕಾಮಗಾರಿಗಳ ಪರ್ವ ನಗರದಲ್ಲಿ ಗೋಚರಿಸುತ್ತಿದೆ. ಲೋಕೋಪಯೋಗಿ ಸೇರಿದಂತೆ ವಿವಿಧ ಇಲಾಖೆಗಳಿಂದ ಅನುಷ್ಠಾನಗೊಂಡಿರುವ 282.66 ಕೋಟಿ ರೂ.ಗಳ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಟೆಂಡರ್ ಹಂತದಲ್ಲಿರುವ 172.18 ಕೋಟಿ ರೂ. ಗಳ ಕಾಮಗಾರಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಲಿದ್ದಾರೆ. ಲೋಕೊಪಯೋಗಿ ಇಲಾಖೆಯ ವತಿಯಿಂದ ಮಾಣಿಕಬಾಗ-ಆಶ್ರಮ ರಸ್ತೆ, ಜೊರಾಪುರ ವಾಟರ್ ಟ್ಯಾಂಕ್-ಜಿಲ್ಲಾ ಕ್ರೀಡಾಂಗಣ, ಮರಾಠಿ ವಿದ್ಯಾಲಯದಿಂದ ವಿಡಿಎ ಕಚೇರಿ ಮಾರ್ಗ ಸೇರಿದಂತೆ ಹಲವಾರು ರಸ್ತೆ ಕಾಮಗಾರಿಗಳು, ಮಹಾನಗರ ಪಾಲಿಕೆ ವತಿಯಿಂದ ಅ್ಜಲಪುರ ಟಕ್ಕೆಯ ಮಹಾಬಳೇಶ್ವರ ಕಾಲನಿ ಆಂತರಿಕ ರಸ್ತೆ, ಲಕ್ಷ್ಮೀ ನಗರ, ಇಬ್ರಾಹಿಂಪುರ ಭಾಗದ ಆಂತರಿಕ ರಸ್ತೆ ನಿರ್ಮಾಣ, ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆಯಡಿಯಲ್ಲಿ ಕಾರ್ಮಿಕರ ಮನೆಗಳ ನಿರ್ಮಾಣ, ಸುಭಾಸಚಂದ್ರ ವತ್ತದಿಂದ ಅಕ್ಕಮಹಾದೇವಿ ಮಹಿಳಾ ವಿವಿವರೆಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ.
ದ್ರಾಕ್ಷಿ ಬೆಳೆಗಾರರ ಕನಸು ನನಸು: 
ವಿಜಯಪುರದ ದ್ರಾಕ್ಷಿ ಹಾಗೂ ಒಣದ್ರಾಕ್ಷಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಇದೆ. ಈ ಮಾರುಕಟ್ಟೆಗೆ ಒಣದ್ರಾಕ್ಷಿ ಸಂಗ್ರಹಣೆಗೆ ರೈತರು ಎದುರಿಸುತ್ತಿದ್ದ ತೊಂದರೆಯನ್ನು ಮನಗಂಡು ಶಾಸಕ ಯತ್ನಾಳ ಅವರು ತೊರವಿ ಗ್ರಾಮದಲ್ಲಿ 35 ಕೋಟಿ ರೂ. ವೆಚ್ಚದಲ್ಲಿ ಶೀತಲ ಗೃಹ ನಿರ್ಮಿಸಲಾಗುತ್ತಿದ್ದು, ಈ ಕಾರ್ಯಕ್ಕೂ ಸಹ ಸಿಎಂ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಮೂಲಕ ಅನೇಕ ವರ್ಷಗಳಿಂದ ದ್ರಾಕ್ಷಿ ಬೆಳೆಗಾರರು ಕಂಡಿದ್ದ ಕನಸು ಸಾಕಾರಗೊಂಡಂತಾಗಿದೆ.
ಅಲ್ಲದೆ 162.8 ಕೋಟಿ ರೂ. ವೆಚ್ಚದಲ್ಲಿ ಮಹಾನಗರ ಪಾಲಿಕೆಯ ನೂತನ ಕಚೇರಿ ಕಟ್ಟಡವನ್ನು ಹಾಗೂ ಸರ್ದಾರ್ ವಲ್ಲಭಭಾಯ್ ಪಟೇಲ್ ವಾಣಿಜ್ಯ ಮಳಿಗೆ ಸಂಕೀರ್ಣವನ್ನು ಹಾಗೂ ಡಾ.ಬಾಬು ಜಗಜೀವನ್ ರಾಂ ಭವನ ಹಾಗೂ ಸರ್ಕಾರಿ ವೀಕ್ಷಣಾಲಯ ಹೊಸ ಕಟ್ಟಡ, ಅಕ್ಕಮಹಾದೇವಿ ಮಹಿಳಾ ವಿವಿ ಆವರಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ಹಾಗೂ ಮಹಿಳಾ ವಸ್ತು ಸಂಗ್ರಹಾಲಯ ಕಟ್ಟಡವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ.
ಸಿದ್ದೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ: 
ಅತ್ಯಾಧುನಿಕವಾಗಿ ಹಾಗೂ ಮನೆಯ ವಾತಾವರಣದಲ್ಲಿಯೇ ಆರೈಕೆಯ ಧ್ಯೇಯೋದ್ದೇಶವನ್ನಿರಿಸಿಕೊಂಡು ನಿರ್ಮಾಣಗೊಂಡಿರುವ ಸಿದ್ದೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲೋಕಾರ್ಪಣೆ ನೆರವೇರಿಸಲಿದ್ದಾರೆ.
108 ಬೆಡ್‌ಗಳ ಆಸ್ಪತ್ರೆಯಲ್ಲಿ 30 ಐಸಿಯುಗಳಿದ್ದು, ಅತಿ ದೊಡ್ಡ ಕಂಪಾರ್ಟ್‌ಮೆಂಟ್ ಹೊಂದಿರುವ ಐಸಿಯುಗೆ ಈ ನೂತನ ಆಸ್ಪತ್ರೆ ಪಾತ್ರವಾಗಿದೆ. ಅಂತಾರಾಷ್ಟ್ರೀಯ ಗುಣಮಟ್ಟದ ನ್ಯೂರೋ ಸರ್ಜರಿ ಆಪರೇಷನ್ ಥಿಯೇಟರ್, ನರ್ಸ್ ಕಾಲ್ ಬೆಲ್ ಅಲರ್ಟ್ ವ್ಯವಸ್ಥೆ, ಸಿಎಆರ್‌ಎಂ ವೈದ್ಯಕೀಯ ಉಪಕರಣ, ಆಕ್ಸಿಜನ್ ಪ್ಲಾಂಟ್, ರೋಗಿಗಳ ಪರಿಚಾರಕರ ವಿಶ್ರಾಂತಿಗಾಗಿ 60 ವಿಶೇಷ ಬೆಡ್ ವ್ಯವಸ್ಥೆ ಹೀಗೆ ಈ ಆಸ್ಪತ್ರೆ ವಿಶೇಷತೆಗಳಿಂದ ಕೂಡಿದ್ದು, ಜನತೆಗೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ನೀಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net