ಪುಂಡಾಟ ಮೆರೆದಿದ್ದ ಇಬ್ಬರು ಆರೋಪಿಗಳ ಬಂಧನ

Crime Logo
Published on

ಬೆಂಗಳೂರು: ರಸ್ತೆಯಲ್ಲಿ ವ್ಯಕ್ತಿಯೊಬ್ಬರ ಕಾರು ಅಡ್ಡಗಟ್ಟಿ ಹಲ್ಲೆಗೆ ಯತ್ನಿಸಿ ಪುಂಡಾಟ ಮೆರೆದಿದ್ದ ಇಬ್ಬರು ಆರೋಪಿಗಳನ್ನು ವೈಟ್‌ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ.

ವೈಟ್‌ಫೀಲ್ಡ್ ಸಮೀಪದ ಸೀಗೇಹಳ್ಳಿಯ ಮುರಳಿ (೨೨) ಮತ್ತು ರಘು (೨೫) ಬಂಧಿತರು. ವೈಟ್‌ಫೀಲ್ಡ್ ಬಳಿಯ ಸಿದ್ದಾಪುರ ರಸ್ತೆಯಲ್ಲಿ ಆ.೫ ರ ಸಂಜೆ ೫.೩೦ ರ ಸುಮಾರಿಗೆ ಆರೋಪಿಗಳು ಅಡ್ಡಾದಿಡ್ಡಿಯಾಗಿ ಬೈಕ್ ಚಾಲನೆ ಮಾಡುತ್ತಿದ್ದರು. ಆಗ ಅದೇ ಮಾರ್ಗದಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಪ್ರಿಯದತ್ತ ಎಂಬುವವರ ವಾಹನಕ್ಕೆ ಮುಂದೆ ಹೋಗಲು ಅವಕಾಶವಾಗದಂತೆ ಆರೋಪಿಗಳು ಇಡೀ ರಸ್ತೆಯಲ್ಲಿ ಅಂಕು ಡೊಂಕಾಗಿ ಬೈಕ್‌ಗಳನ್ನು ಚಾಲನೆ ಮಾಡಿ ತೊಂದರೆ ಕೊಟ್ಟಿದ್ದರು.

ಕೆಲ ಸಮಯ ಆರೋಪಿಗಳ ಬೈಕ್‌ಗಳ ಹಿಂದೆಯೇ ನಿಧಾನವಾಗಿ ಕಾರು ಚಾಲನೆ ಮಾಡಿಕೊಂಡು ಹೋದ ಪ್ರಿಯದತ್ತ ಅವರು ಅಂತಿಮವಾಗಿ ದಾರಿ ಬಿಡುವಂತೆ ಹಾರ್ನ್ ಮಾಡಿದ್ದರು. ಆದರೂ ಆರೋಪಿಗಳು ದಾರಿ ಬಿಟ್ಟಿಲ್ಲ. ಅಂತಿಮವಾಗಿ ಪ್ರಿಯದತ್ತ, ಆರೋಪಿಗಳ ಬೈಕ್ ಹಿಂದಿಕ್ಕಿ ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಮುಂದೆ ಹೋಗಿದ್ದರು. ನಂತರ ಆರೋಪಿಗಳು ಅವರ ಕಾರನ್ನು ಹಿಂಬಾಲಿಸಿಕೊಂಡು ಬಂದು ಮಾರ್ಗ ಮಧ್ಯೆ ಅಡ್ಡಗಟ್ಟಿದ್ದಾರೆ. ಆಗ ವಾಹನದಿಂದ ಕೆಳಗಿಳಿದ ಪ್ರಿಯದತ್ತ ಅವರಿಗೆ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಅಲ್ಲದೆ, ಕೈಯಲ್ಲಿ ಕಲ್ಲು ಹಿಡಿದು ಕಾರಿನ ಗಾಜು ಒಡೆಯುವುದಾಗಿ ದುಂಡಾವರ್ತಿ ತೋರಿದ್ದಾರೆ.

ಸ್ಥಳೀಯರು ಪ್ರಿಯದತ್ತ ಅವರ ರಕ್ಷಣೆಗೆ ಧಾವಿಸುತ್ತಿದ್ದಂತೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಪ್ರಿಯದತ್ತ ಅವರ ಕಾರಿನ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಆರೋಪಿಗಳ ಪುಂಡಾಟದ ದೃಶ್ಯಾವಳಿ ಸೆರೆಯಾಗಿತ್ತು. ಪ್ರಿಯದತ್ತ, ಈ ದೃಶ್ಯಾವಳಿ ಸಮೇತ ಟ್ವೀಟ್ ಮಾಡುವ ಮೂಲಕ ಪೊಲೀಸರಿಗೆ ದೂರು ಕೊಟ್ಟಿದ್ದರು. ಇದರ ಬೆನ್ನಲ್ಲೇ ಪೊಲೀಸರು ಮಂಗಳವಾರ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಿಯದತ್ತ ಅವರು ಪತ್ನಿ ಮತ್ತು ನಾದಿನಿ ಜತೆ ಕಾರಿನಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಬಂಧಿತರ ವಿರುದ್ಧ ಕೊಲೆ ಯತ್ನ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟೆನ್ನಿಸ್ ಗುರುವಿನ ಪುಂಡಾಟ:
ನಲ್ಲೂರಹಳ್ಳಿಯಲ್ಲಿ ಖಾಸಗಿ ಕ್ರೀಡಾ ತರಬೇತಿ ಕೇಂದ್ರದಲ್ಲಿ ಮುರುಳಿ ಟೆನ್ನಿಸ್ ತರಬೇತುದಾರನಾಗಿದ್ದರೆ, ಆತನ ಸ್ನೇಹಿತ ರಘು ಎಲೆಕ್ಟ್ರಿಷಿಯನ್ ಆಗಿದ್ದು ಗೂಂಡಾಗಿರಿ ನಡೆಸಿ ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವರ್ತೂರು ಬಳಿಯ ಗುಂಜೂರು ರಸ್ತೆಯಲ್ಲಿ ಜುಲೈ ತಿಂಗಳಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ದುಷ್ಕರ್ಮಿಗಳು ಅಶೋಕ್ ಎಂಬ ಸ್‌ಟಾವೇರ್ ಎಂಜಿನಿಯರ್ ಕಾರು ಅಡ್ಡಗಟ್ಟಿ ಪುಂಡಾಟ ಮೆರೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net