

ವಿಜಯವಾಣಿ ಸುದ್ದಿಜಾಲ ಉಡುಪಿ
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿದ್ದ ಸೌಜನ್ಯಾ ಪರ ಹೋರಾಟಗಾರ ಮಹೇಶ ಶೆಟ್ಟಿ ತಿಮರೋಡಿ ಅವರಿಗೆ ಉಡುಪಿ ಜಿಲ್ಲಾ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ನಾಗೇಶ ಎನ್.ಎ. ಆಗಸ್ಟ್ 23ರಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.
ಜಾಮೀನು ನೀಡಿದ ಬಳಿಕ ಕಾನೂನಿನ ಷರತ್ತು ಪಾಲಿಸಬೇಕು. ಇನ್ನೆಂದೂ ಅಸಭ್ಯವಾಗಿ, ಇನ್ನೊಬ್ಬರ ತೇಜೋವಧೆ ಮಾಡುವ ರೀತಿಯಲ್ಲಿ ಮಾತನಾಡಬಾರದು ಎಂದು ನ್ಯಾಯಾಧೀಶರು ತಿಮರೋಡಿ ಅವರಿಗೆ ತಾಕೀತು ಮಾಡಿದರು. 20 ಸಾವಿರ ರೂ. ಬಾಂಡ್ ಹಾಗೂ ಓರ್ವರ ಶ್ಯೂರಿಟಿ ಮೂಲಕ ಜಾಮೀನು ನೀಡಲಾಗಿದೆ.
ಉಡುಪಿ ನ್ಯಾಯಾಲಯದಲ್ಲಿ ಶನಿವಾರ ಮಧ್ಯಾಹ್ನದ ಕಲಾಪದಲ್ಲಿ ಸರ್ಕಾರಿ ಸಹಾಯಕ ಅಭಿಯೋಜಕಿ ಮೋಹಿನಿ ಅವರು ಸರ್ಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಮಾರ್ಗದರ್ಶನದಲ್ಲಿ ಜಾಮೀನು ನೀಡದಂತೆ ಆಕ್ಷೇಪಣೆ ಸಲ್ಲಿಸಿದರು.
ಆರೋಪಿ ತಿಮರೋಡಿ ಪರ ವಕೀಲ ವಿಜಯ್ ವಾಸು ಪೂಜಾರಿ ತನ್ನ ಕಕ್ಷಿದಾರನಿಗೆ ಜಾಮೀನು ನೀಡಬೇಕು ಎಂದು ವಾದ ಮಂಡಿಸಿದರು. ಮಹೇಶ ತಿಮರೋಡಿ ಅವರು ಹಿಂದು ಮುಖಂಡರಾಗಿದ್ದಾರೆ. ಅನ್ಯಧರ್ಮದ ಚಕಾರ ಎತ್ತಿಲ್ಲ. ಅವರು ಹಿಂದು ಧರ್ಮದ ಕುರಿತಾಗಿಯೇ ಮಾತನಾಡಿದ್ದಾರೆ. ಆದರೆ, ಅವರ ವಿರುದ್ಧ ಸಾರ್ವಜನಿಕ ಶಾಂತಿ ಭಂಗಕ್ಕೆ ಅನ್ವಯಿಸುವಂತಹ ಸೆಕ್ಷನ್ ಹಾಕಿದ್ದಾರೆ. ಅದು ಈ ಘಟನೆಗೆ ಅನ್ವಯಿಸುವುದಿಲ್ಲ. ಅಲ್ಲದೆ, ಅವರು ಮಾತನಾಡಿದ ವಿಡಿಯೋದಿಂದ ರಾಜ್ಯದ ಎಲ್ಲಿಯೂ ಶಾಂತಿಭಂಗ ಉಂಟಾಗಿಲ್ಲ ಎಂದು ವಾದಿಸಿದರು.
ಬೆಳಗ್ಗೆ ನಡೆದ ಕಲಾಪದಲ್ಲಿ ಪ್ರಕರಣದ ದೂರುದಾರ ರಾಜೀವ ಕುಲಾಲ್ ಅವರ ಪರವಾಗಿ ಅಭಿಯೋಜನೆಗೆ ಸಹಕರಿಸಲು ಅವಕಾಶ ಕಲ್ಪಿಸುವಂತೆ ಮಂಗಳೂರಿನ ಹಿರಿಯ ವಕೀಲ ಶಂಭು ಶರ್ಮ ಅಹವಾಲು ಸಲ್ಲಿಸಿದರು. ಇದಕ್ಕೆ ಆರೋಪಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದರು. ಅದಕ್ಕೆ ಶಂಭು ಶರ್ಮ, 339(2) ಬಿಎನ್ಎಸ್ಎಸ್ ಅಡಿಯಲ್ಲಿ ದೂರುದಾರರ ಪರವಾಗಿ ವಾದಿಸಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು. ಇದಕ್ಕೆ ನ್ಯಾಯಧೀಶರು ಪ್ರತಿಕ್ರಿಯಿಸಿ, ಇದು ಸುದೀರ್ಘ ಪ್ರಕ್ರಿಯೆ ಆಗಿದ್ದು ಮುಂದಿನ ದಿನಗಳಲ್ಲಿ ಚರ್ಚಿಸೋಣ ಎಂದರು. ವಕಾಲತು ಪೂರ್ಣವಾಗದೆ ಆರೋಪಿಯ ಜಾಮೀನು ಅರ್ಜಿ ವಿಚಾರಣೆ ನಡೆಸಬಾರದು ಎಂದು ಕೋರಿದರು.
ಮಹೇಶ ಶೆಟ್ಟಿ ತಿಮರೋಡಿ ಅವರನ್ನು ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಅನೇಕ ಜನರು ಹಾಗೂ ಅವರ ಅಭಿಮಾನಿಗಳು ಸೇರಿದ್ದರು.
ಪ್ರಕರಣದ ತನಿಖಾಧಿಕಾರಿ ಪಿಎಸ್ಐ ಅಶೋಕ ಮಾಲಭಾಗಿ ಅವರು ನ್ಯಾಯಾಲಯಕ್ಕೆ ಆಗಮಿಸಿ, ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಕೋರಿದರು. ಆರೋಪಿಯನ್ನು 1 ಗಂಟೆಯ ಅವಧಿಯೊಳಗಾಗಿ ನ್ಯಾಯಾಲಯ ಕರೆತರುವಂತೆ ನ್ಯಾಯಾಧೀಶರು ಸೂಚಿಸಿದರು. ಬ್ರಹ್ಮಾವರ ಸಿಪಿಐ ಗೋಪಿಕೃಷ್ಣ, ಪಿಎಸ್ಐ ಅಶೋಕ ಮಾಲಭಾಗಿ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಹಿರಿಯಡ್ಕ ಜೈಲಿನಿಂದ ತಿಮರೋಡಿ ಅವರನ್ನು ಮಧ್ಯಾಹ್ನ 1:30ರ ವೇಳೆಯಲ್ಲಿ ಕೋರ್ಟ್ಗೆ ಹಾಜರುಪಡಿಸಲಾಯಿತು. ಬಳಿಕ ಪೊಲೀಸರು ಅವರನ್ನು ಉಡುಪಿ ನಗರಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದರು.
ಆರೋಪಿ ಮಹೇಶ ಶೆಟ್ಟಿ ತಿಮರೋಡಿ ಅವರನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಬ್ರಹ್ಮಾವರ ಪಿಎಸ್ಐ ಕೇಳಿದರು. ನ್ಯಾಯಧೀಶರು ಎರಡು ಗಂಟೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದರು. ಮಹಜರು ಪ್ರಕ್ರಿಯೆಗೆ ಇನ್ನೂ ಹೆಚ್ಚಿನ ಸಮಯಾವಕಾಶ ಕೇಳಿದಾಗ ಕುಪಿತರಾದ ನ್ಯಾಯಾಧೀಶರು, ಪಿಎಸ್ಐಅನ್ನು ತರಾಟೆಗೆ ತೆಗೆದುಕೊಂಡರು. ಬಂಧನದ ದಿನವೇ ಯಾಕೆ ಪೊಲೀಸ್ ಕಸ್ಟಡಿಗೆ ಕೇಳಿಲ್ಲ? ನಿನ್ನೆಯೂ ಕೇಳಬಹುದಿತ್ತಲ್ಲ? ಇಂದು ಬೆಳಗ್ಗೆ ನಡೆದ ಕಲಾಪಕ್ಕೂ ತಡವಾಗಿ ಬಂದಿದ್ದೀರಿ. ನಿಮ್ಮಿಂದಲೇ ತಪ್ಪಾಗಿದೆ ಎಂದರು.