

ಮಂಗಳೂರು: ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದಾಗಿ ಬೆದರಿಕೆ ಒಡ್ಡಿ ಹಿರಿಯ ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಮಾತನಾಡಿ ಹಣಕ್ಕೆ ಬೇಡಿಕೆ ಇಟ್ಟ ಇಬ್ಬರು ಆರೋಪಿಗಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ನಿವಾಸಿಗಳಾದ ಗೋಕುಲ್‌ರಾಜು(20) ಹಾಗೂ ಪವನ್ ಎಲ್(20) ಬಂಧಿತರು.
ಸಾಕ್ಷೀರಾಜ್ ಎನ್ನುವ ಮಹಿಳೆಯ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ ಕೆಪಿಟಿ ನಿವಾಸಿ ರಾಜೇಶ್ ಎಂಬುವರಿಗೆ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯ ಹೆಸರಿನಲ್ಲಿ ಕರೆ ಮಾಡಿ, ಅಶ್ಲೀಲ ಚಿತ್ರಗಳನ್ನು ಕಳುಹಿಸಿದ್ದರು. ನಂತರ ರಾಜೇಶ್ ಅವರಿಂದ ಬೆತ್ತಲೆ ಚಿತ್ರಗಳನ್ನು ಕೇಳಿ ಪಡೆದು, ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡಲಿಲ್ಲ ಎಂದಾದರೆ ಈ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡಿ ಹಣ ಪಡೆದಿದ್ದರು. ಒಂದಷ್ಟು ಹಣ ನೀಡಿದ ಬಳಿಕವೂ ಹೆಚ್ಚಿನ ಹಣಕ್ಕಾಗಿ ಬೇಡಿಕೆ ಇಟ್ಟು ಹಣ ನೀಡದಿದ್ದಾಗ ಹಿರಿಯ ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ ವಂಚನೆ ಮಾಡಿದ್ದಾರೆ. ಅವರ ಕಿರುಕುಳ ತಾಳಲಾರದೆ ರಾಜೇಶ್ ಪೊಲೀಸರಿಗೆ ದೂರು ನೀಡಿದ್ದರು.
ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ಮಾರ್ಗದರ್ಶನದಲ್ಲಿ ಡಿಸಿಪಿ ವಿನಯ ಗಾಂವ್‌ಕರ್ ಅವರ ನಿರ್ದೇಶನದಂತೆ ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿತ್ತು. ಸೈಬರ್ ಕ್ರೈಂ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಬಿ.ಸಿ.ಗಿರೀಶ್ ಅವರು ಆರ್ಥಿಕ ಮತ್ತು ಮಾದಕದ್ರವ್ಯ ಅಪರಾಧಗಳ ಠಾಣೆ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.