ಬಂಧಿತ ಡ್ರಗ್ ಪೆಡ್ಲರ್ ಬೆಂಜಮಿನ್, ಹೊಸ ವರ್ಷಕ್ಕೆ 25 ಕೋಟಿ ರೂ. ಮೌಲ್ಯದ ಡ್ರಗ್ಸ್ ಮಾರಾಟಕ್ಕೆ ಪ್ಲಾನ್

Arrest Kaidhi
Published on

ಬೆಂಗಳೂರು: ಅಡುಗೆ ಮಾಡುವ ಪ್ರೆಜರ್ ಕುಕ್ಕರ್‌ನಲ್ಲಿ ಡ್ರಗ್ಸ್ ತಯಾರಿಸಿ ಮಾರಾಟ ಮಾಡುತ್ತಿದ್ದ ಪ್ರಕರಣದಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ವಿದೇಶಿ ಡ್ರಗ್ ಪೆಡ್ಲರ್ ಬೆಂಜಮಿನ್ ಹೊಸ ವರ್ಷಕ್ಕೆ ಸುಮಾರು 25 ಕೋಟಿ ರೂ.ಮೌಲ್ಯದ ಡ್ರಗ್ಸ್ ಮಾರಾಟ ಮಾಡಲು ಯೋಜನೆ ರೂಪಿಸಿದ್ದ ಎಂಬ ಸ್ಫೋಟಕ ಮಾಹಿತಿ ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಇತ್ತೀಚೆಗೆ ಮನೆಯೊಂದರಲ್ಲಿ ಡ್ರಗ್ಸ್ ತಯಾರಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಬೆಂಜಮಿನ್‌ನನ್ನು ಬಂಧಿಸಿ ೧೦ ಕೋಟಿ ರೂ. ಮೌಲ್ಯದ 5 ಕೆ.ಜಿ ಎಂಡಿಎಂಎ ಸೇರಿ ಇತರೆ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ವಿಚಾರಣೆ ವೇಳೆ ಸುಮಾರು 25 ಕೋಟಿ ರೂ.ಮೌಲ್ಯದ ಡ್ರಗ್ಸ್ ಅನ್ನು ಸರಬರಾಜು ಮಾಡಲು ಎಲ್ಲಾ ತಯಾರಿಯನ್ನು ಮಾಡಿಕೊಂಡಿದ್ದ ಆತ ಸುಮಾರು ೩೦೦ ರಿಂದ ೩೫೦ ಗ್ರಾಹಕರು ಈತನ ಸಂಪರ್ಕದಲ್ಲಿದ್ದ ಎಂಬ ಮಾಹಿತಿಯನ್ನು ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಹೊಸ ವರ್ಷಕ್ಕೆ ಡ್ರಗ್ಸ್ ಮಾರಾಟದ ಯೋಜನೆ ರೂಪಿಸಿದ್ದ ಸಂದರ್ಭದಲ್ಲಿ ಸಿಸಿಬಿ ಪೊಲೀಸರ ಕೈಗೆ ಈತ ಸಿಕ್ಕಿ ಬಿದ್ದಿದ್ದ. ಆ್ಯಪ್ ಮೂಲಕ ಗ್ರಾಹಕರನ್ನು ಸಂಪರ್ಕಿಸಿ ಸಬ್ ಪೆಡ್ಲರ್‌ಗಳ ಕೈಯಲ್ಲಿ ಮಾದಕವಸ್ತುಗಳನ್ನು ಸರಬರಾಜು ಮತ್ತು ಮಾರಾಟ ಮಾಡಿ, ಯಾವುದೇ ಸಾಕ್ಷ್ಯಗಳು ಸಿಗದಂತೆ ಈ ದಂಧೆಯನ್ನು ನಡೆಸುತ್ತಿದ್ದ.ಜತೆಗೆ ದೆಹಲಿ ಹಾಗೂ ಮುಂಬೈಯಿಂದ ರೈಲಿನ ಮೂಲಕ ಡ್ರಗ್ಸ್ ತಯಾರಿಕಾ ಸಾಮಾಗ್ರಿಗಳನ್ನು ತರಿಸುತ್ತಿದ್ದ. ಆರೋಪಿ ಮುಂದಿನ ಡಿಸೆಂಬರ್ ಅಂತ್ಯದ ವೇಳೆಗೆ 25 ಕೋಟಿ ರೂ. ಮೌಲ್ಯದ ಡ್ರಗ್ಸ್ ತಯಾರಿಕೆಗೆ ಪ್ಲಾನ್ ಮಾಡಿದ್ದ. ಪ್ರಸ್ತುತ ಈತನ ಸಂಪರ್ಕದಲ್ಲಿದ್ದವರ ಬಗ್ಗೆ ಸಿಸಿಬಿ ಮಾಹಿತಿ ಕಲೆ ಹಾಕುತ್ತಿದ್ದು, ಈ ದಂಧೆಯಲ್ಲಿ ಇನ್ನು ಯಾರು ಯಾರು ಇದ್ದಾರೆ ಎಂಬುದರ ಬಗ್ಗೆ ಸಿಸಿಬಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net