

ಚಿಕ್ಕಬಳ್ಳಾಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಮೂವರು ಪುಂಡರನ್ನು ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದಾರೆ. ತೌಫಿಕ್, ಅಸ್ಕತ್ ಮತ್ತು ಅಪ್ರಾಪ್ತ ಬಾಲಕರು ಸೇರಿ ಮೂವರು ಬಂಧಿತರು. ಆರೋಪಿಗಳಿಂದ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ಕೆಲವು ದಿನಗಳಿಂದ ಬಾಗೇಪಲ್ಲಿ ಸರಹದ್ದಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನಗಳನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವೀಲಿಂಗ್ ಮಾಡುತ್ತಿರುವುದರ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದಿದ್ದವು. ಜತೆಗೆ ಸಾಮಾಜಿಕ ಜಾಲತಾಣದಲ್ಲೂ ಈ ವಿಷಯ ಚರ್ಚೆಗೆ ಗ್ರಾಸವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಪುಂಡರ ಹಾವಳಿಯನ್ನು ತಡೆಯಲು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜಾ ಇಮಾಮ್ ಖಾಸೀಂ, ಡಿವೈಎಸ್ಪಿ ಶಿವಕುಮಾರ್ ಮಾರ್ಗದರ್ಶನದಲ್ಲಿ ಬಾಗೇಪಲ್ಲಿ ಪೊಲೀಸ್ ನಿರೀಕ ಪ್ರಶಾಂತ್ ಆರ್. ವರ್ಣಿ ನೇತೃತ್ವದ ತಂಡವನ್ನು ರಚಿಸಿದ್ದರು.
* ನಿರಂತರ ಹಾವಳಿ
ಇತ್ತೀಚೆಗೆ ನಂದಿ ಬೆಟ್ಟದ ತಪ್ಪಲು, ಕಾರಹಳ್ಳಿ ಕ್ರಾಸ್, ದೇವನಹಳ್ಳಿ ಸಮೀಪ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಪುಂಡರನ್ನು ಬಂಧಿಸಿ, ವಾಹನ ವಶಪಡಿಸಿಕೊಳ್ಳಲಾಗಿತ್ತು. ಹಾಗೆಯೇ ಅತಿ ವೇಗದ ಚಾಲನೆಯೊಂದಿಗೆ ಕರ್ಕಶ ಧ್ವನಿ ಹೊರಸೂಸುತ್ತಿದ್ದ ಬೈಕುಗಳ ಸೈಲೆನ್ಸ್ರ್ ಗಳನ್ನು ನಾಶಪಡಿಸಲಾಗಿತ್ತು. ಆದರೂ ಪುಂಡರು ಮುಂಜಾವ ಮತ್ತು ರಾತ್ರಿ ವೇಳೆ ಅಪಾಯಕಾರಿ ಸಾಹಸವನ್ನು ಪ್ರದರ್ಶಿಸುತ್ತಿದ್ದು ಅವಘಡಗಳು ಸಂಭವಿಸುತ್ತಿವೆ. ಪ್ರಯಾಣಿಕರು ಆತಂಕದಲ್ಲಿ ಸಂಚರಿಸುವಂತಾಗಿದೆ.