ಪೋಸ್ಟರ್ ವಿರೂಪಗೊಳಿಸಿದವರನ್ನು ಶೀಘ್ರ ಬಂಧಿಸಿ

ನಗರಸಭೆ ಅಧ್ಯಕ್ಷೆ ರೇಖಾ ರಮೇಶ್
ನಗರಸಭೆ ಅಧ್ಯಕ್ಷೆ ರೇಖಾ ರಮೇಶ್
Published on

ಕೊಳ್ಳೇಗಾಲ: ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವುಳ್ಳ ಪೋಸ್ಟರನ್ನು ವಿರೂಪಗೊಳಿಸಿ, ಬುದ್ಧನ ಮೂರ್ತಿಯನ್ನು ಧ್ವಂಸ ಮಾಡಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕೆಂದು ನಗರಸಭೆ ಅಧ್ಯಕ್ಷೆ ರೇಖಾ ರಮೇಶ್ ಆಗ್ರಹಿಸಿದರು.

ಅಹಿಂಸೆ, ಶಾಂತಿ, ಸಹಾನುಭೂತಿ ಮತ್ತು ಕರುಣೆಯನ್ನು ಭಗವಾನ್ ಬುದ್ಧ ಜಗತ್ತಿಗೆ ಸಾರಿದ್ದಾರೆ. ಜೀವಮಾನ ಪುರ್ತಿ ಶೋಷಿತರು, ದಮನಿತರು, ನೊಂದವರ ಪರವಾಗಿ ಹೋರಾಡಿ ದೇಶದಲ್ಲಿ ಸಮಾನತೆ ನೆಲೆಸುವ ನಿಟ್ಟಿನಲ್ಲಿ ಅಂಬೇಡ್ಕರ್ ಅವರು ಬೃಹತ್ ಸಂವಿಧಾನ ರಚಿಸಿ ಸರ್ವರಿಗೂ ರಕ್ಷಣೆ ನೀಡಿದ್ದಾರೆ. ಇಂತಹ ಮಹನೀಯರಿಗೆ ಅಪಮಾನ ಮಾಡಿರುವವರನ್ನು ಗಡಿಪಾರು ಮಾಡಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಅಂಬೇಡ್ಕರ್ ಅವರ ಭಾವಚಿತ್ರ, ಪ್ರತಿಮೆಗಳಿಗೆ ಪದೇ ಪದೆ ಅಪಮಾನ ಮಾಡುವ ಕೃತ್ಯಗಳು ನಡೆಯುತ್ತಿದೆ. ಅಂಬೇಡ್ಕರ್ ಮತ್ತು ಬುದ್ಧರನ್ನು ದೇವರೆಂದು ಪೂಜಿಸಲಾಗುತ್ತದೆ. ಸಂವಿಧಾನದ ನೆರಳಲ್ಲಿ ನಾವೆಲ್ಲರೂ ಸುಖ, ಶಾಂತಿ ನೆಮ್ಮದಿ ಜೀವನ ನಡೆಸುತ್ತಿದ್ದೇವೆ. ಇಂತಹ ಮಹಾನ್ ಮಾನವತಾವಾದಿಯ ಭಾವಚಿತ್ರವನ್ನು ವಿರೋಪಗೊಳಿಸಿರುವವರಿಗೆ ಕಠಿಣ ಶಿಕ್ಷೆಯಾಗಬೇಕು. ಕೋಮು ಸ್ವಾಸ್ಥ್ಯವನ್ನು ಹದಗೆಡಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಮಾಡಿದವರನ್ನು ಪೊಲೀಸರು ಬಂಧಿಸಬೇಕು. ಚಾಮರಾಜನಗರ ಜಿಲ್ಲಾಡಳಿತ ಜಿಲ್ಲೆಯೊಳಗೆ ಇಂತಹ ಕಹಿ ಘಟನೆ ಮರುಕಳಿಸದಂತೆ ಕ್ರಮವಹಿಸಬೇಕು. ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯಿಸಿ ಕೊಳ್ಳೇಗಾಲ ಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net