

ಬಾಳೆಹೊನ್ನೂರು: 2023ರ ಅಕ್ಟೋಬರ್ 2ರಂದು ಕೊಪ್ಪದ ಬಸ್ತಿ ಬಾಳಕ್ಕಿ ತೋಟದ ಮಾಲೀಕ ಸುರೇಶ ಆತ್ಮಹತ್ಯೆಗೂ ಮುನ್ನ ವಿಡಿಯೋದಲ್ಲಿ ಹೆಸರಿಸಿರುವವರ ವಿರುದ್ಧ ಕ್ರಮಕೈಗೊಂಡು ನಮಗೆ ನ್ಯಾಯ ಒದಗಿಸಬೇಕು ಎಂದು ಮೃತರ ಸಹೋದರ ಸದಾನಂದ ಒತ್ತಾಯಿಸಿದರು.
ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐದು ಜನ ಗಂಡು ಮಕ್ಕಳು ಹಾಗೂ ಆರು ಜನ ಹೆಣ್ಣು ಮಕ್ಕಳಿರುವ ನಮ್ಮ ಕುಟುಂಬಕ್ಕೆ ಕೊಗ್ರೆ ಸಮೀಪದ ಬಸ್ತಿ ಬಾಳಕ್ಕಿ ಯಲ್ಲಿ 3.5 ಎಕರೆ ಜಾಗವಿದೆ. ಸಹೋದರ ಸುರೇಶ್ ಕುಟುಂಬದ ಆಧಾರ ಸ್ತಂಭವಾಗಿದ್ದರು. ಜಮೀನಿನ ಮಧ್ಯದಲ್ಲಿ ಹಾದು ಹೋಗಿರುವ ರಸ್ತೆ ವಿಚಾರವಾಗಿ ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರು ಹಾಗೂ ಕೆಲ ವ್ಯಕ್ತಿಗಳು ನೀಡಿದ ಕಿರುಕುಳದಿಂದ ಮಾನಸಿಕವಾಗಿ ನೊಂದು ಸುರೇಶ್ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ವಿಡಿಯೋದಲ್ಲಿ ತಿಳಿಸಿದ್ದಾರೆ.
ಮೃತರಿಗೆ ಇಬ್ಬರು ಪುತ್ರಿಯರು, ಪತ್ನಿ ಇದ್ದು ಸರ್ಕಾರ ಪರಿಹಾರ ನೀಡಬೇಕು. ಸಾವಿಗೆ ಕಾರಣರಾದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನ್ಯಾಯ ಸಿಗದಿದ್ದಲ್ಲಿ ನಾವುಗಳು ಕೂಡ ಸುರೇಶನ ಹಾದಿ ಹಿಡಿಯುವುದು ಅನಿವಾರ್ಯವಾಗಲಿದೆ ಎಂದರು.
ತಿಲಿಕೆ ರಾಘವೇಂದ್ರ ಮಾತನಾಡಿ, ಗಾರೆ ಕೆಲಸ ಮಾಡುತ್ತಿದ್ದ ಸುರೇಶ ನಮ್ಮ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದರು. ಮೇ.12, 2023ರಂದು ರಸ್ತೆ ವಿಚಾರವಾಗಿ ಬಸ್ತಿ ಬಾಳಕ್ಕಿಯಲ್ಲಿ ಕಾಂಗ್ರೆಸ್ ಮುಖಂಡರೊಬ್ಬರು ಸುರೇಶ್ ಮೇಲೆ ಹಲ್ಲೆ ನಡೆಸಿದ ಕಾರಣ ಅವರ ವಿರುದ್ಧ ಜಯಪುರ ಠಾಣೆಯಲ್ಲಿ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಹಲ್ಲೆಗೆ ಪ್ರತ್ಯಕ್ಷ ಸಾಕ್ಷಿ ಕೂಡ ನಾನಾಗಿದ್ದೇನೆ.
ಹಲ್ಲೆಯಿಂದ ತೀವ್ರ ಮನನೊಂದಿದ್ದ ಸುರೇಶ್ ಎರಡೇ ದಿನದಲ್ಲಿ ಜೀವಭಯದಿಂದ ಮನೆ ತೊರೆದು ಬೇರೆ ಕಡೆಗೆ ತೆರಳಿದ್ದರು. ಮಾನಸಿಕವಾಗಿ ಕಿರುಕುಳ ನೀಡಿ ಸಾವಿಗೆ ಕಾರಣರಾದವರ ವಿರುದ್ಧ ಜಯಪುರ ಪೊಲೀಸರನ್ನು ಹೊರತುಪಡಿಸಿ ಬೇರೆ ಪೊಲೀಸರಿಂದ ತನಿಖೆಯಾಗಬೇಕು. ಇಲ್ಲದಿದ್ದಲ್ಲಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಹಮ್ಮಿಕೊಳ್ಳುವುದು ಎಂದು ಹೇಳಿದರು. ಸುರೇಶ್ ಸಾವಿಗೂ ಮುನ್ನ ಚಿತ್ರೀಕರಣ ಮಾಡಿದ ವಿಡಿಯೋಗಳನ್ನು ಬಿಡುಗಡೆ ಮಾಡಿದರು. ಮೃತರ ಸಹೋದರ ನಾರಾಯಣ, ಅಚ್ಯುತ, ಶ್ರೀಧರ್ ಇದ್ದರು.