

ರಾಯಚೂರು: ಬೆಳಗಾವಿ ಜಿಲ್ಲೆಯ ಕಳ್ಳಿಗುದ್ದಿ ಗ್ರಾಮದಲ್ಲಿನ ಹನುಮಾನ ದೇವಸ್ಥಾನದ ಅರ್ಚಕ ಬಾಲಕೃಷ್ಣನನ್ನು ಕೊಲೆ ಮಾಡಿರುವರನ್ನು ಬಂಧಿಸಬೇಕು. ಪ್ರಕರಣ ದಾಖಲಿಸಲು ನಿರಾಕರಿಸಿ ಪಿಎಸ್‌ಐನನ್ನು ಅಮಾನತ್ತು ಮಾಡಬೇಕು ಎಂದು ಅಖಂಡ ಕರ್ನಾಟಕ ಹೂಗಾರ ಮಹಾಸಭಾ ಸಂಘ ಒತ್ತಾಯಿಸಿದೆ.
ಸಂಘದ ನಿಯೋಗ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಗುರುವಾರ ಮನವಿ ಸಲ್ಲಿಸಿ, ಕಾಯಿ ಒಡೆಯುವುದಕ್ಕೆ ಸಂಬಂಸಿದಂತೆ ಹಲ್ಲೆ ನಡೆಸಿದ್ದರಿಂದ ಬಾಲಕೃಷ್ಣ ಮೃತಪಟ್ಟಿದ್ದಾನೆ. ಕೂಡಲೇ ಕೊಲೆ ಮಾಡಿದವರನ್ನು ಬಂಸಿ, ಮೃತ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಆಗ್ರಹಿಸಿದರು.
ಗ್ರಾಮದಲ್ಲಿನ ಲಕ್ಷ್ಮಿದೇವಿಯ ಜಾತ್ರೆಗೆ ಅರ್ಚಕ ಬಾಲಕೃಷ್ಣ ಕುಟುಂಬದೊಂದಿಗೆ ಹೋಗಿದ್ದು, ಗ್ರಾಮದ ರಾಮಣ್ಣ ಮಾಹರೆಡ್ಡಿ, ಲಕ್ಷ್ಮಣ ದೇವಸ್ಥಾನದಲ್ಲಿ ನಮ್ಮದು ಕಾಯಿ ಒಡೆಯಬೇಕು, ನೀವು ಯಾಕೆ ಒಡೆಯುತ್ತಿದ್ದೀರಿ ಎಂದು ನಿಂದಿಸಿ, ಹಲ್ಲೆ ನಡೆಸಿದ್ದಾರೆ.
ಗಾಯಗೊಂಡಿದ್ದ ಬಾಲಕೃಷ್ಣ ಚಿಕಿತ್ಸೆಗಾಗಿ ಸೇರಿಸಿದ್ದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಲು ಠಾಣೆಗೆ ಹೋದರೆ ಪಿಎಸ್‌ಐ ದೂರು ಸ್ವೀಕರಿಸದೆ ದಬ್ಬಾಳಿಕೆ ನಡೆಸಿದ್ದಾರೆ. ಕೂಡಲೇ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಸಂಘದ ಅಧ್ಯಕ್ಷ ಬಸವರಾಜ ಹೂಗಾರ, ಪದಾಕಾರಿಗಳಾದ ನರಸಣ್ಣ ಪೂಜಾರಿ, ಅಮರೇಶಪ್ಪ ಹೂಗಾರ, ಶ್ರೀಕಾಂತ ಹೂಗಾರ, ಪ್ರೇಮ್ ಹೂಗಾರ, ಶರಣು ಹೂಗಾರ, ಶಿವರಾಜ ಹೂಗಾರ ಇದ್ದರು.