

ಹರಪನಹಳ್ಳಿ: ರೈತರಿಗೆ ವಂಚನೆ ಮಾಡಿದ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಮೇಶ್ವರಪ್ಪ ಅವರನ್ನು ಬಂಧಿಸಲು ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾ ಪದಾಧಿಕಾರಿಗಳು ಬಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಕೆ ಎಂ ನಿರಂಜನ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಗುಡಿಹಳ್ಳಿ ಹಾಲೇಶ ಮಾತನಾಡಿ, ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ರೈತರು ಮರಣ ಹೊಂದಿದವರು ಮತ್ತು ಮತ್ತು ಮಹಿಳಾ ಸ್ವಸಹಾಯ ಸಂಘದಲ್ಲಿ ಸಾಲ ತೆಗೆದುಕೊಂಡು ರೈತರಿಗೆ ಅಲ್ಪಸ್ವಲ್ಪ ಹಣ ನೀಡಿದ ಪರಮೇಶ್ವರಪ್ಪ ಕೋಟಿಗಟ್ಟಲೆ ಹಣ ವಂಚಿಸಿ ಪರಾರಿಯಾಗಿದ್ದಾನೆ..
ರೈತರ ಗಮನಕ್ಕೂ ಬಾರದಂತೆ ಕಂಪ್ಯೂಟರ್ ನಲ್ಲಿ ಪಹಣಿ ಪಡೆದು ಸರ್ಕಾರದಿಂದ ಸಾಕಷ್ಟು ಹಣ ಪಡೆದು ವಂಚಿಸಿದ್ದು, ಸಾಲ ಮರುಪಾವತಿ ಮಾಡುವಂತೆ ರೈತರಿಗೆ ಬ್ಯಾಂಕ್ ನೋಟೀಸ್ ಕಳಿಸಿದ್ದರಿಂದ ಆತಂಕಕ್ಕೊಳಗಾಗಿದ್ದಾರೆ. ಮಹಿಳಾ ಸ್ವಸಹಾಯ ಸಂಘಗಳ ಉಳಿತಾಯದ ಹಣ, ಹಾಗೂ ಸಣ್ಣ ವ್ಯಾಪಾರಿಗಳ ಠೇವಣಿ ಹಣ, ಹಾಗೂ ಬಾಂಡ್ ರೂಪದಲ್ಲಿ ಇಟ್ಟ ಹಣ ಲಪಟಾಯಿಸಿದ್ದಾನೆ. ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಲು ಪರಮೇಶ್ವರಪ್ಪ ಅವರನ್ನು ಕೂಡಲೆ ಬಂಧಿಸಿ ಆಸ್ತಿ- ಪಾಸ್ತಿಗಳನ್ನು ಜಪ್ತಿ ಮಾಡಿಕೊಳ್ಳಬೇಕು ಎಂದರು.