

ತಿ.ನರಸೀಪುರ: ಅಂಬೇಡ್ಕರ್ ಗೀತೆಯನ್ನು ಹಾಕಿದ ಕಾರಣಕ್ಕೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸಿರಿವಾರ ಗ್ರಾಮದಲ್ಲಿ ದಲಿತ ಯುವಕರಿಬ್ಬರ ಮೇಲೆ ಹಲ್ಲೆ ಮಾಡಿರುವವರನ್ನು ಬಂಧಿಸಿ, ಗಡಿಪಾರು ಮಾಡುವಂತೆ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ಯ ತಾಲೂಕು ಸಂಚಾಲಕ ಕನ್ನಹಳ್ಳಿ ಶಿವಕುಮಾರ್ ಆಗ್ರಹಿಸಿದರು.
ಜ.4 ರಂದು ಹಾಲಿನ ವಾಹನದಲ್ಲಿ ಅಂಬೇಡ್ಕರ್ ಅವರ ಗೀತೆಯನ್ನು ಹಾಕಿಕೊಂಡು ಹೋಗುತ್ತಿದ್ದರೆಂಬ ಕಾರಣಕ್ಕೆ ದಲಿತ ಯುವಕರಿಬ್ಬರ ಮೇಲೆ ಸವರ್ಣೀಯ ಸಮುದಾಯದ ಚಂದ್ರಶೇಖರ್ ಮತ್ತು ನರಸಿಂಹರಾಜು ಹಲ್ಲೆ ನಡೆಸಿದ್ದು, ಅವರಿಬ್ಬರನ್ನು ಕೂಡಲೇ ಬಂಧಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಅಂಬೇಡ್ಕರ್ ಮತ್ತು ದಲಿತ ವಿರೋಧಿ ಮನಸ್ಥಿತಿಯನ್ನುಳ್ಳ ಕಿಡಿಗೇಡಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾದ ಯುವಕರಲ್ಲಿ ದೀಪು ಎಂಬ ಯುವಕನ ಮರ್ಮಾಂಗಕ್ಕೆ ಬಲವಾದ ಪೆಟ್ಟು ಬಿದ್ದಿದೆ. ಅಂಬೇಡ್ಕರ್ ಮತ್ತು ದಲಿತರನ್ನು ರಾಜಕಾರಣಕ್ಕೆ ಬಳಸಿಕೊಳ್ಳುವ ರಾಜ್ಯ ಸರ್ಕಾರ ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ, ಗಡಿಪಾರು ಮಾಡಲು ಕಠಿಣ ಕ್ರಮ ಕೈಗೊಳ್ಳಬೇಕು. ಸಂತ್ರಸ್ತ ದಲಿತ ಯುವಕರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ದಸಂಸ ಮುಖಂಡರಾದ ಬನ್ನಹಳ್ಳಿ ಬಸವರಾಜು ನಾಗರಾಜು ವಾಟಾಳ್, ಆರ್. ಶಂಕರಮೂರ್ತಿ, ಕನ್ನಹಳ್ಳಿ ಸೋಮಣ್ಣ ಹಾಗೂ ಉಮೇಶ್ ಮಾದಾಪುರ ಸುದ್ದಿಗೋಷ್ಠಿಯಲ್ಲಿದ್ದರು.