

ಕೊಪ್ಪಳ: ಪಿಎಫ್ಐ ಜಿಲ್ಲಾಧ್ಯಕ್ಷ ಮೊಹಮದ್ ಫಯಾಜ್ ನನ್ನು ಗುರುವಾರ ಬೆಳಗಿನ ಜಾವ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಕಾಡಗೊಂಡನಹಳ್ಳಿಯಲ್ಲಿ ಫಯಾಜ್ ವಿರುದ್ಧ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ. ಈ ಸಂಬಂಧ ಬೆಂಗಳೂರು ಪೊಲೀಸರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬುಧವಾರ ರಾತ್ರಿಯೇ ಫಯಾಜ್ ಮನೆಯಲ್ಲಿರುವುದನ್ನು ಖಚಿತಪಡಿಸಿಕೊಂಡಿದ್ದ ಪೊಲೀಸರು ಬೆಳಗಿನ ಜಾವ ಮೂರು ಗಂಟೆಗೆ ಬಂಧಿಸಿದ್ದಾರೆ. ಬಂಧನಕ್ಕೆ ಕಾರಣವೇನೆಂಬ ಬಗ್ಗೆ ಪೊಲೀಸರು ಗುಟ್ಟು ಬಿಟ್ಟು ಕೊಟ್ಟಿಲ್ಲ.
ಹಲವು ವರ್ಷಗಳಿಂದ ಫಯಾಜ್ ಪಿಎಫ್ ಐ ಸಂಘಟನೆಯಲ್ಲಿ ಸಕ್ರಿಯನಾಗಿದ್ದಾನೆ. ಹಲವಾರು ಹೋರಾಟ, ಸಮಾವೇಶಗಳಲ್ಲಿ ಭಾಗಿಯಾಗಿದ್ದಾನೆನ್ನಲಾಗಿದೆ. ಬೆಂಗಳೂರು, ದೆಹಲಿ ಸೇರಿ ಇತರೆಡೆ ಹೆಚ್ಚು ಪ್ರವಾಸಕ್ಕೆ ತೆರಳುತ್ತಿದ್ದನೆಂಬ ಮಾಹಿತಿ ಇದೆ.
ಇಂದು ಹಿಂದು ಕಾರ್ಯಕರ್ತ ಪ್ರವೀಣ್ ನೆಟ್ಟರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ತಂಡ ರಾಜ್ಯದ ಹಲವೆಡೆ ದಾಳಿ ನಡೆಸಿದೆ. ಫಯಾಜ್ ಪಿಎಫ್ಐ ಜಿಲ್ಲಾಧ್ಯಕ್ಷನಾಗಿದ್ದು, ಪ್ರಕರಣಕ್ಕೆ ಸಂಬಂಧವಿದೆಯಾ ಎಂಬ ಅನುಮಾನ ಮೂಡಿಸಿದೆ. ಸ್ಥಳೀಯ ಪೊಲೀಸರು ಗಣೇಶ ವಿಸರ್ಜನೆ ಬಂದೋಬಸ್ತ್ ನಲ್ಲಿದ್ದಾಗ ಎಸ್ಪಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದೆ.