ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ

crime
Published on

ಮೈಸೂರು: ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ನಗರ ಅಪರಾಧ ಪತ್ತೆ ದಳ (ಸಿಸಿಬಿ) ಪೊಲೀಸರು, ಬಂಧಿತರಿಂದ 26 ಲಕ್ಷ ರೂ. ವೌಲ್ಯದ 416 ಗ್ರಾಂ ಚಿನ್ನಾಭರಣ, ದ್ವಿಚಕ್ರವಾಹನ ವಶಪಡಿಸಿಕೊಂಡಿದ್ದಾರೆ.
ಕಳೆದ ಡಿಸೆಂಬರ್ 28 ರಂದು ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ರಚನೆಗೊಂಡಿದ್ದ ಸಿಸಿಬಿ ವಿಶೇಷ ತಂಡ, ಜ.17 ರಂದು ನಗರದ ಅಶೋಕ ರಸ್ತೆಯಲ್ಲಿ ಒಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಆತ ನೀಡಿದ ಮಾಹಿತಿ ಮೇರೆಗೆ ಮಂಡಿ ಮೊಹಲ್ಲಾದ ಮಿಷನ್ ಆಸ್ಪತ್ರೆ ಬಳಿ ಮತ್ತೊಬ್ಬನನ್ನು ಬಂಧಿಸಲಾಗಿದೆ. ಇವರಿಬ್ಬರ ಬಂಧನದಿಂದ ವಿಜಯನಗರ ಠಾಣೆಯ ಒಂದು ಕಳವು, ಒಂದು ದ್ವಿಚಕ್ರ ವಾಹನ ಕಳವು, ಹಾವೇರಿ ಪಟ್ಟಣ ಠಾಣೆಯಲ್ಲಿ ಒಂದು ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಸಿಸಿಬಿ ಘಟಕದ ಎಸಿಪಿ ಎಸ್.ಎನ್.ಸಂದೇಶ್‌ಕುಮಾರ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್ಸ್‌ಪೆಕ್ಟರ್ ಎಂ.ಮೋಹನ್‌ಕುಮಾರ್, ಎಸ್‌ಐ ಮಾರುತಿ ಅಂತರಗಟ್ಟಿ, ಕಿರಣ್ ಹಂಪಿಹೊಳಿ, ಎಎಸ್‌ಐಗಳಾದ ಅಸ್ಗರ್ ಖಾನ್, ಜಗದೀಶ್, ಸಿಬ್ಬಂದಿ ಸಲೀಂ ಪಾಷ, ರಾಮಸ್ವಾಮಿ, ಎಂ.ಆರ್. ಗಣೇಶ್, ಉಮಾ ಮಹೇಶ್, ಲಕ್ಷ್ಮಿಕಾಂತ್, ಪ್ರಕಾಶ್, ಸುರೇಶ್, ಮೋಹನಾರಾಧ್ಯ, ಚಂದ್ರ ಶೇಖರ್, ಮಹೇಶ್, ನರಸಿಂಹ ರಾಜು, ಮಧುಸೂದನ್, ಶಿವಣ್ಣ, ಗೋವಿಂದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net