ಮನೆಯಲ್ಲಿ ಕಳವು ಮಾಡುತ್ತಿದ್ದ ಇಬ್ಬರ ಬಂಧನ

MDG chain
ಕಣಚೂರು ಗ್ರಾಮದ ಮನೆಯಲ್ಲಿ ಕಳವಾಗಿದ್ದ ಚಿನ್ನಾಭರಣವನ್ನು ವಶಪಡಿಸಿಕೊಂಡ ಪೊಲೀಸರು ಪ್ರದರ್ಶಿಸಿದರು. ಸಿಪಿಐ ಸೋಮೇಗೌಡ, ಪಿಎಸ್‌ಐ ಹರ್ಷವರ್ಧನ್ ಹಾಗೂ ಸಿಬ್ಬಂದಿ ಇದ್ದರು.
Published on

ಮೂಡಿಗೆರೆ: ಕಣಚೂರು ಗ್ರಾಮದ ಮನೆಯಲ್ಲಿ ಕಳೆದ ವಾರ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಮಂಗಳವಾರ ಪೊಲೀಸರು ಬಂಧಿಸಿ 78 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಕೃಷ್ಣಪುರ ಗ್ರಾಮದ ಸ್ವಾಮಿ (35) ದಾವಣಗೆರೆ ಜಿಲ್ಲೆ ಚನ್ನಗಿರಿ ಸಂಜಯ್ (35) ಬಂಧಿತ ಆರೋಪಿಗಳು. ಸಂಜಯ್ ಹಂಡುಗುಳಿ ಗ್ರಾಮದ ಯುವತಿಯನ್ನು ವಿವಾಹವಾಗಿದ್ದರಿಂದ ಸ್ವಾಮಿಯ ಪರಿಚಯವಾಗಿತ್ತು.
ಕಣಚೂರು ಗ್ರಾಮದ ವೇದಾವತಿ ಎಂಬುವವರು ಕಾಫಿ ತೋಟದ ಕೆಲಸಕ್ಕೆ ಹೋಗಿದ್ದಾಗ ಆರೋಪಿಗಳು ಹಾಡಹಗಲೆ ಮನೆಯ ಹೆಂಚು ತೆಗೆದು ನುಗ್ಗಿ 65 ಗ್ರಾಂ ಚಿನ್ನಾಭರಣ, 150 ಗ್ರಾಂ ಬೆಳ್ಳಿ ವಸ್ತುಗಳನ್ನು ದೋಚಿದ್ದರು. ವೇದಾವತಿ ಗೋಣಿಬೀಡು ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪೊಲೀಸರು ಆರೋಪಿಗಳನ್ನು ಬಂಧಿಸಿ ಚಿನ್ನಾಭರಣ ಹಾಗೂ ಕಳವಿಗೆ ಬಳಸಿದ್ದ ಬೈಕ್ ವಶಪಡಿಸಿಕೊಂಡಿದ್ದಾರೆ. ಬೈಕಿನಲ್ಲಿ ತಿರುಗಾಡುತ್ತಿದ್ದ ಆರೋಪಿಗಳು ಒಂಟಿ ಮನೆ ಹಾಗೂ ಬೀಗ ಹಾಕಿದ ಮನೆಯನ್ನು ಗುರುತಿಸಿ ಕಳವು ಮಾಡುತ್ತಿದ್ದರು. 20ಕ್ಕೂ ಹೆಚ್ಚು ಮನೆಗಳಲ್ಲಿ ಕಳವು ಮಾಡಿ ಜೈಲುವಾಸ ಅನುಭವಿಸಿ ಬಂದಿದ್ದಾರೆ.
ಕಣಚೂರು ಗ್ರಾಮದ ಮನೆಯಲ್ಲಿ ಕಳವು ಮಾಡಿದ ಬಳಿಕ ಹಾಸನ ಜಿಲ್ಲೆ ಶನಿವಾರಸಂತೆ ಎಂಬಲ್ಲಿ ಮನೆಯೊಂದರ ಹೆಂಚು ತೆಗೆದು ಕಳವು ಮಾಡಿರುವುದಾಗಿ ತನಿಖೆ ವೇಳೆ ಬಾಯಿ ಬಿಟ್ಟಿದ್ದಾರೆ. ಅಲ್ಲಿನ ಕಳ್ಳತನಕ್ಕೆ ಸಂಬಂಧಿಸಿದಂತೆ 20 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೂಡಿಗೆರೆ ಸಿಪಿಐ ಸೋಮೇಗೌಡ, ಗೋಣಿಬೀಡು ಪಿಎಸ್‌ಐ ಹರ್ಷವರ್ಧನ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net