

ಹನೂರು : ತಾಲೂಕಿನ ಮಂಚಾಪುರ ಗ್ರಾಮದ ಹೊರವಲಯದಲ್ಲಿ ಭಾನುವಾರ ಮಾರಾಟ ಮಾಡುವ ಉದ್ದೇಶದಿಂದ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ರಾಮಾಪುರ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಗೋಪಿಶೆಟ್ಟಿಯೂರಿನ ಸೇಟು ಹಾಗೂ ಮುತ್ತುಶೆಟ್ಟಿಯೂರಿನ ವಿಜಯ ಆಲಿಯಾಸ್ ವಿಜಿ ಬಂಧಿತರು. ಈ ಇಬ್ಬರು ಬೆಳಗ್ಗೆ ಕೆ.ಗುಂಡಾಪುರ ಗ್ರಾಮದ ಉಡುತೊರೆ ಜಲಾಶಯದ ನಾಲೆ ಮಾರ್ಗವಾಗಿ ಬೈಕ್‌ನಲ್ಲಿ ರಾಮಾಪುರಕ್ಕೆ ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ಧರ್ಮೇಂದ್ರ ಹಾಗೂ ಪ್ರಭಾರ ಇನ್‌ಸ್ಪೆಕ್ಟರ್ ಶಶಿಕುಮಾರ್ ಮಾರ್ಗದರ್ಶನದಲ್ಲಿ ಸಬ್ ಇನ್‌ಸ್ಪೆಕ್ಟರ್‌ಗಳಾದ ಲೋಕೇಶ್, ಈಶ್ವರ್ ಹಾಗೂ ಸಿಬ್ಬಂದಿ ಮಂಚಾಪುರ ಗ್ರಾಮದ ಹೊರವಲಯದಲ್ಲಿ ದಾಳಿ ನಡೆಸಿ ಪರಿಶೀಲಿಸಿದಾಗ ಶ್ರೀಗಂಧವನ್ನು ಸಾಗಿಸುತ್ತಿರುವುದು ದೃಢಪಟ್ಟಿದೆ.
ಬಳಿಕ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಬಂಧಿತರಿಂದ 15 ಕೆ.ಜಿ. 50 ಗ್ರಾಂ ತೂಕವುಳ್ಳ 36 ಶ್ರೀಗಂಧದ ತುಂಡುಗಳು, 3350 ಗ್ರಾಂ ತೂಕದ ಚಕ್ಕೆ ಹಾಗೂ ಬೇರುಗಳನ್ನು ವಶಕ್ಕೆ ಪಡೆದರು. ವಿಚಾರಣೆಯ ಬಳಿಕ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಯಿತು. ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಸಿಬ್ಬಂದಿ ಸಿದ್ದೇಶ್ ಕುಮಾರ್, ಲಿಯಾಖತ್ ಆಲಿಖಾನ್, ಗಿರೀಶ್, ಮಹೇಂದ್ರ ಹಾಗೂ ಇನ್ನಿತರರು ಭಾಗವಹಿಸಿದ್ದರು.