ಹೆದ್ದಾರಿಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಇಬ್ಬರ ಬಂಧನ

tunganagar police arrest persons
ಶಿವಮೊಗ್ಗ ತುಂಗಾನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಏರ್‌ಗನ್ ವಶಕ್ಕೆ ಪಡೆದರು.
Published on

ಶಿವಮೊಗ್ಗ: ಶಿವಮೊಗ್ಗ-ಭದ್ರಾವತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ನಿಲ್ಲಿಸಿ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದು ಅವರಿಂದ ಒಂದು ಏರ್ ಗನ್ ಮತ್ತು ಕಾರು ವಶಕ್ಕೆ ಪಡೆದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಸಿರಗನಹಳ್ಳಿಯ ಹರ್ಷ ಪಟೇಲ್ (23) ಮತ್ತು ಅಜ್ಜಂಪುರದ ಅಭಿಷೇಕ್ (23) ಬಂಧಿತರು. ಇವರು ಡಿ.26ರಂದು ಶಿವಮೊಗ್ಗ-ಭದ್ರಾವತಿ ಹೆದ್ದಾರಿಯ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ ಸಮೀಪ ಕಾರಿನಿಂದ ಇಳಿದು ನೃತ್ಯ ಮಾಡಿದ್ದಾರೆ. ಇದೇ ವೇಳೆ ಒಬ್ಬಾತ ಏರ್ ಗನ್ ಹಿಡಿದುಕೊಂಡಿದ್ದು ಅದರಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಬಳಿಕ ಏರ್ ಗನ್ ಹಿಡಿದುಕೊಂಡು ಕಾರಿನಲ್ಲಿ ತೆರಳಿದ್ದರು. ಘಟನೆಯಿಂದ ರಸ್ತೆಯಲ್ಲಿ ಓಡಾಡುತ್ತಿದ್ದವರು ಆತಂಕಕ್ಕೀಡಾಗಿದ್ದರು.
ಸ್ಥಳೀಯರೊಬ್ಬರು ವಿಡಿಯೋ ಮಾಡಿಕೊಂಡಿದ್ದು ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪರಿಶೀಲನೆ ನಡೆಸಿದ ತುಂಗಾನಗರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅಜಾಗರೂಕತೆ ಮತ್ತು ಬೇಜವಾಬ್ದಾರಿ ತೋರಿದ ಹಿನ್ನೆಲೆ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲು ಮಾಡಲಾಗಿದೆ. ತುಂಗಾನಗರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net