

ಚಾಮರಾಜನಗರ : ಚಿರತೆಯೊಂದನ್ನು ಬೇಟೆಯಾಡಿ ಅದರ ಕಾಲುಗಳನ್ನು ತುಂಡರಿಸಿ ಒಯ್ಯುತ್ತಿದ್ದ ಇಬ್ಬರನ್ನು ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ಶಾಂತರಾಜು, ಅರುಣ್ ಬಂಧಿತರು. ಮತ್ತೊಬ್ಬ ಆರೋಪಿ ನಟರಾಜ್ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ.
ಮೂವರು ಆರೋಪಿಗಳು ನಾಡ ಬಂದೂಕು ಹಿಡಿದುಕೊಂಡು ವನ್ಯಜೀವಗಳ ಬೇಟೆಗೆ ಹೊರಟಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಕೊಳ್ಳೇಗಾಲ ಉಪವಿಭಾಗ ಅಪರಾಧ ಪತ್ತೆದಳದ ಅಧಿಕಾರಿಗಳು, ಸಿಬ್ಬಂದಿ ಮತ್ತು ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಜಂಟಿಯಾಗಿ ತಂಡಗಳನ್ನು ರಚಿಸಿಕೊಂಡು ಕಾರ್ಯಾಚರಣೆಗಿಳಿದಿದ್ದರು. ಎರಡು ತಂಡ ಮಧುವನಹಳ್ಳಿ, ಚಿಕ್ಕಲ್ಲೂರು, ಕೊತ್ತನೂರು ಭಾಗದಲ್ಲಿ ಗಸ್ತು ನಡೆಸುತ್ತಿತ್ತು. ಶನಿವಾರ ಬೆಳಗಿನ ಜಾವಾ 5 ಗಂಟೆಯಲ್ಲಿ ದೊಡ್ಡಿಂದುವಾಡಿ ಚಾನಲ್ ರಸ್ತೆ ಬಳಿ ಆರೋಪಿಗಳು ಚಿರತೆ ಕಾಲು ಕತ್ತರಿಸಿ ಬೈಕ್‌ನಲ್ಲಿ ಕದ್ದೊಯ್ಯುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಈ ವೇಳೆ ಪರಿಶೀಲನೆ ನಡೆಸಿದಾಗ ಅಕ್ರಮವಾಗಿ ಹೊಂದಿರುವ ಎರಡು ನಾಡ ಬಂದೂಕುಗಳು ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಂಡಿದ್ದಾರೆ. ಇಬ್ಬರನ್ನು ವಿಚಾರಣೆಗೊಳಪಡಿಸಿದಾಗ ನಾಲ್ಕು ದಿನಗಳ ಹಿಂದೆ ಕಾವೇರಿಪುರ ಸಮೀಪದ ಕಗ್ಗಲಿಪುರ ಅರಣ್ಯ ಪ್ರದೇಶದಲ್ಲಿ ನಟರಾಜು ಸೇರಿದಂತೆ ಮೂವರು ಚಿರತೆ ಬೇಟೆಯಾಡಿದ್ದೆವು. ಅದರ ಚರ್ಮ ಸುಲಿಯುವಾಗ ಯಾರೋ ಬಂದಂತಾಯಿತು. ಹಾಗಾಗಿ, ಚಿರತೆಯನ್ನು ಅಲ್ಲೇ ಬಿಟ್ಟು ಅದರ ಎರಡು ಕಾಲುಗಳನ್ನು ಮಾತ್ರ ಕತ್ತರಿಸಿಕೊಂಡು ಬಂದಿದ್ದೆವು ಎಂದು ಒಪ್ಪಿಕೊಂಡಿದ್ದಾರೆ. ಆರೋಪಿಗಳಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಎಎಸ್ಪಿ ಟಿ.ಜೆ. ಉದ್ದೇಶ್, ಡಿವೈಎಸ್ಪಿ ಸೋಮೇಗೌಡ ಮಾರ್ಗದರ್ಶನದಲ್ಲಿ ಸಿಪಿಐ ಕೃಷ್ಣಪ್ಪ ನೇತೃತ್ವದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ಗಣೇಶ್, ಚಲುವರಾಜ್, ಎಎಸ್‌ಐ ತಕ್ಕಿವುಲ್ಲಾ, ಹೆಡ್ ಕಾನ್ಸ್‌ಟೇಬಲ್ ಶಿವಕುಮಾರ್, ಕಿಶೋರ್, ಬಿಳಿಗೌಡ, ವೆಂಕಟೇಶ್ ಮತ್ತಿತರರು ಶೋಧಕಾರ್ಯ ನಡೆಸಿದರು.