ಕುಖ್ಯಾತ ಮನೆಗಳ್ಳರಿಬ್ಬರ ಬಂಧನ

Arrest of two notorious house thieves
Published on

ಬ್ಯಾಡಗಿ: ಪಟ್ಟಣದ ನೆಹರು ನಗರದ ನಿವಾಸಿ ಬಸವರಾಜ ಶಂಕ್ರಪ್ಪ ಸಂಕಣ್ಣನವರ ಎಂಬುವರ ಮನೆಯಲ್ಲಿ ಹಗಲಿನಲ್ಲೇ ಚಿನ್ನ ಹಾಗೂ ಬೆಳ್ಳಿ ದೋಚಿದ್ದ ಕುಖ್ಯಾತ ಕಳ್ಳರನ್ನು ಬ್ಯಾಡಗಿ ಪೋಲಿಸರು ಸೋಮವಾರ ಬಂಧಿಸಿದ್ದಾರೆ."

ಬಳ್ಳಾರಿ ಮೂಲದ ಎಚ್​. ಮಲ್ಲಿಕಾರ್ಜುನ ನಾಯಕ ತಂದೆ ರಾಮಾನಾಯ್ಕ ಹಾಗೂ ವೆಂಕಟೇಶ ನಾಯ್ಕ ತಂದೆ ದುರ್ಗಾನಾಯಕ ಇಬ್ಬರು ಖತಾರ್​ನಾಕ್​ ಕಳ್ಳರನ್ನು ಪೋಲಿಸರು ಬಳ್ಳಾರಿಯಲ್ಲಿ ಚಾಣಾಕ್ಷತನದಿಂದ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 110 ಗ್ರಾಂ ಬಂಗಾರದ ಒಡವೆಗಳು, 390 ಗ್ರಾಮ ಬೆಳ್ಳಿ ಆಭರಣಗಳು ಹಾಗೂ ಬೈಕ್​ ಸೇರಿದಂತೆ ಒಟ್ಟು 7.58 ಲ ರೂ. ಮೌಲ್ಯದ ಸಾಮಗ್ರಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ 15 ವರ್ಷಗಳಿಂದ ಒಂದಿಲ್ಲೊಂದು ಅಪರಾಧಗಳಲ್ಲಿ ಪಾಲ್ಗೊಂಡಿರುವ ಆರೋಪಿಗಳು, ಕಳ್ಳತನ ಮಾಡಲು ಬೈಕ್​ ಬಳಸುತ್ತ ಯಾರಿಗೂ ಸಂಶಯ ಬಾರದಂತೆ ಓಡಾಡುತ್ತಿದ್ದರು. ಹಗಲು ಹೊತ್ತಿನಲ್ಲಿ ಬಡಾವಣೆಗಳಲ್ಲಿ ಬೈಕ್​ನಲ್ಲಿ ಇಬ್ಬರು ಓಡಾಡಿ, ಮನೆಗಳಿಗೆ ಹಾಗೂ ಹೊರಗಡೆ ಗೇಟ್​ಗಳಿಗೆ ಬೀಗ ಹಾಕಿರುವುದನ್ನು ಗುರುತಿಸಿ ಕಳವು ಮಾಡುತ್ತಿದ್ದರು. ಇಬ್ಬರ ಮೇಲೆ ಸುಮಾರು 30 ಪ್ರಕರಣಗಳು ದಾಖಲಾಗಿದ್ದು, ಈ ಕುರಿತು ವಿವಿಧ ಪೋಲಿಸ್​ ಠಾಣೆಗಳಲ್ಲಿ ಪ್ರಕರಣಗಳಿವೆ ಎನ್ನಲಾಗಿದೆ.

ಸಾರ್ವಜನಿಕರ ಆತಂಕ ದೂರ: ಎರಡು ತಿಂಗಳಿಂದ ನೆಹರು ನಗರ, ಸಂಗಮೇಶ್ವರ ನಗರ, ವಿದ್ಯಾನಗರ, ಕಾಕೋಳ ರಸ್ತೆ ಸೇರಿದಂತೆ ಬ್ಯಾಡಗಿ ವಿವಿಧ ಬಡಾವಣೆಗಳಲ್ಲಿ ಹಗಲು ಹೊತ್ತಿನಲ್ಲಿ ಆರೋಪಿಗಳು ತಮ್ಮ ಕೈಚಳಕ ತೋರಿಸಿ ಚಿನ್ನ, ಬೆಳ್ಳಿ, ನಗದು ದೋಚಿ ಪರಾರಿಯಾಗಿದ್ದರು. ಇದರಿಂದ ಪಟ್ಟಣದ ಸಾರ್ವಜನಿಕರು ಭಯದ ವಾತಾವರಣದಲ್ಲಿದ್ದು, ಊರು ಬಿಟ್ಟು ತೆರಳಲು ಅಂಜುವಂತಾಗಿತ್ತು. ಇದೀಗ ಕಳ್ಳರ ಬಂಧನದಿಂದ ಸಾರ್ವಜನಿಕರಲ್ಲಿ ನೆಮ್ಮದಿ ತಂದಿದೆ.

ಎಸ್ಪಿ ಅಂಶುಕುಮಾರ, ಎಎಸ್ಪಿ ಲಕ್ಷಣ ಶಿರಕೋಳ, ಡಿವೈಎಸ್ಪಿ ಎಂ.ಎಸ್​. ಪಾಟೀಲ ಮಾರ್ಗದರ್ಶನದಲ್ಲಿ ಸಿಪಿಐ ಮಾಲತೇಶ ಲಂಬಿ, ಪಿಎಸ್​ಐ ಅರವಿಂದ ಬಿ.ಎಸ್​. ನೇತೃತ್ವದದಲ್ಲಿ ಕಾರ್ಯಾಚರಣೆ ನಡೆದಿತ್ತು. ಎಎಸ್​ಐ ಬಸವರಾಜ ಅಂಜುಟಗಿ, ಡಿ.ಎಚ್​. ಪೂಜಾರ, ನಂದಿಗೌಡ್ರ, ಎಫ.ಯು. ಖಾಜಿ, ಲೋಕೇಶ ಲಮಾಣಿ, ಗುಡ್ಡಪ್ಪ ಹಳ್ಳೂರು, ರಾಜು ಗೊದೇರ, ಸತೀಶ ಮಾರಕಟ್ಟೆ, ಮಾರುತಿ ಹಾಲಭಾವಿ, ಹಿದಾಯತ್​ ದೊಡ್ಡಮುಲ್ಲಾ, ವೀರನಗೌಡ ಹನುಮಂತಪ್ಪ ಎಂ., ಅಶೋಕ ಬಾಕಿರ್, ಬೀರಪ್ಪ ಬೆಳಕೇರಿ, ಪ್ರಭು ಸಿಂಧಗಿಮಠ, ಮಂಜು ಮುಚ್ಚಟ್ಟಿ, ಹನುಮಂತ ಸುಂಕದ, ರಾಜು ಕಾಟೇನಹಳ್ಳಿ, ಶಿವರಾಜ ಇಮ್ಮಡಿ, ಬಿ.ಎನ್​. ಬಚ್ಚಪ್ಪಗೌಡ್ರ ತಂಡದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net