

ಹುಬ್ಬಳ್ಳಿ: ತಾಲೂಕಿನ ಹಳ್ಯಾಳ ಗ್ರಾಮದಲ್ಲಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೋಲಿಸರು ತನಿಖೆ ನಡೆಸಿ 24 ಗಂಟೆಯೊಳಗೆ ಇಬ್ಬರು ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಭಾನುವಾರ ರಾತ್ರಿ 9.30ರ ಸುಮಾರಿಗೆ ಮುಂಡಗೋಡದ ಮೂಲದ ಹಳ್ಯಾಳ ಗ್ರಾಮದ ನಿವಾಸಿ ಶರೀಫ್‌ಸಾಬ್ ಎಂಬಾತನನ್ನು ಗ್ರಾಮದ ಸರ್ಕಾರಿ ಶಾಲೆಯ ನಿರ್ಮಾಣ ಹಂತದ ಕೊಠಡಿಯಲ್ಲಿ ಕಲ್ಲಿನಿಂದ ಜಜ್ಜಿ ಕೊಲೆಯಾಗಿತ್ತು. ಈ ವಿಷಯವನ್ನು ಗ್ರಾಮಸ್ಥರು ಪೋಲಿಸರಿಗೆ ತಿಳಿಸಿದ್ದರು.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಇನ್‌ಸ್ಪೆಕ್ಟರ್ ಮುರಗೇಶ ಚನ್ನಣ್ಣವರ ಮತ್ತವರ ತಂಡ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಪ್ರಕರಣದ ಬೆನ್ನು ಬಿದ್ದ ತಂಡ, ಕೊಲೆ ಆರೋಪಿ ಹುಬ್ಬಳ್ಳಿಯ ಯಲ್ಲಾಪುರ ಓಣಿಯ ನಿವಾಸಿ ಶಶಿಧರ ಚೆನ್ನುಜಿ ಅಲಿಯಾಸ್ ಶೇಶ್ಯಾ ಹಾಗೂ ಹಳ್ಯಾಳ ಗ್ರಾಮದ ನಾಗರಾಜ ಸೋಮರಡ್ಡಿ ಎಂಬಾತನನ್ನು ಬಂಧಿಸಿದ್ದು, ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಪೋಲಿಸರ ಮುಂದೆ ತಪ್ಪ್ರೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.