ಇಬ್ಬರು ಅಂತರಜಿಲ್ಲಾ ಕಳ್ಳರ ಬಂಧನ

111
ವಿವಿಧ ಪ್ರಕರಣಗಳಡಿ ಕೋಲಾರ ನಗರದ ಠಾಣೆ ಪೊಲೀಸರು ಇಬ್ಬರು ಆರೋಪಿಗಳು ಮತ್ತು ಅವರು ಬಳಸುತ್ತಿದ್ದ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿರುವುದು.
Published on

ಕೋಲಾರ: ಅಂಗಡಿಗಳ ಶೆಲ್ಟರ್​ ಮುರಿದು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ತಿಮ್ಮಸಂದ್ರ ನಿವಾಸಿ ರೋಹಿತ್​ (22), ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಹುಲ್ಲೂಟು ಗ್ರಾಮದ ದಾದಾಪೀರ್​ (19)ಬಂಧಿತರು. ಖದೀಮರಿಂದ ಕೃತ್ಯಕ್ಕೆ ಬಳಸಿದ್ದ 3 ದ್ವಿಚಕ್ರವಾಹನ, ಜರ್ಕಿನ್​, ಮಂಕಿಕ್ಯಾಪ್​ ವಶಪಡಿಸಿಕೊಂಡು ನ್ಯಾಯಾಲಯ ಬಂಧನಕ್ಕೆ ಒಪ್ಪಿಸಲಾಗಿದೆ.

ಆರೋಪಿಗಳು ಮಂಕಿಕ್ಯಾಪ್​ ಧರಿಸಿ ದ್ವಿಚಕ್ರ ವಾಹನದಲ್ಲಿ ವಿಲಿಂಗ್​ ಮಾಡುವುದು, ಹೆದ್ದಾರಿ, ನಗರದ ವಿವಿಧ ರಸ್ತೆಗಳಲ್ಲಿ ಜನ ಇಲ್ಲದ್ದನ್ನು ನೋಡಿಕೊಂಡು ಅಂಗಡಿಗಳ ಶೆಲ್ಟರ್​ ಮುರಿದು ಸಿಕ್ಕಿದಷ್ಟು ನಗದು, ಬೆಲೆ ಬಾಳುವ ವಸ್ತುಗ ದೋಚಿ ಪರಾರಿಯಾಗುತ್ತಿದ್ದರು. ಎರಡು ತಿಂಗಳ ಹಿಂದೆ ನಗರದ ಟೇಕಲ್​ ರಸ್ತೆಯಲ್ಲಿ ಒಂದೇ ದಿನ ರಾತ್ರಿ 7 ಅಂಗಡಿಗಳಲ್ಲಿ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದರು. ಈ ಕೃತ್ಯವು ಅಂಗಡಿ ಮಾಲೀಕರ ನಿದ್ದೆಗೆಡಿಸಿತ್ತು. ಪ್ರಕರಣ ಸಂಬಂಧ ಕೋಲಾರ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಬಿ.ನಿಖಿಲ್​, ಎಎಸ್ಪಿಗಳಾದ ರವಿಶಂಕರ್​, ಜಗದೀಶ್​, ಡಿವೈಎಸ್ಪಿ ಮಾರ್ಗದರ್ಶನದಲ್ಲಿ ತಂಡ ರಚನೆ ಮಾಡಿದ್ದರು.

ನಗರ ಠಾಣೆ ವೃತ್ತ ನಿರೀಕ್ಷ ಎಂ.ಸದಾನಂದ, ಪಿಎಸ್​ಐ ಸೈಯದ್​ ಖಾಸಿಂ ಹಾಗೂ ಸಿಬ್ಬಂದಿಯಿದ್ದ ತಂಡ ಹಲವು ಸಿಸಿ ಕ್ಯಾಮರಾಗಳು, ಆಧುನಿಕ ತಂತ್ರಜ್ಞಾನದ ಸಹಾಯದಿಂದ ಆರೋಪಿಗಳನ್ನು ರಾಯಚೂರು ಜಿಲ್ಲೆಯ ಸಿಂಧನೂರು ಬಸ್​ ನಿಲ್ದಾಣದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರು ಕೋಲಾರ ನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಪೆರೇಸಂದ್ರ, ಚಿಂತಾಮಣಿ, ತುಮಕೂರು, ನೆಲಮಂಗಲ, ದೇವನಹಳ್ಳಿ, ರಾಮನಗರಗಳಲ್ಲೂ ಕಳ್ಳತನಗಳನ್ನು ಎಸಗಿದ್ದರು ಎಂದು ಪೊಲಿಸರು ತಿಳಿಸಿದ್ದಾರೆ.

ಮನೆ ಬೀಗ ಮುರಿದು ಕಳವು

ಮುಳಬಾಗಿಲು: ತಾಲೂಕಿನ ಬೈರಕೂರು ಹೋಬಳಿ ಪೆತ್ತಾಂಡಹಳ್ಳಿಯ ಪಿ.ಆರ್​. ರಾಮಕೃಷ್ಣಪ್ಪ ಅವರ ಮನೆಯ ಬಾಗಿಲು ಮುರಿದು ಬಿರುವಿನಿಂದ 15 ಸಾವಿರ ನಗದು, ಸುಮಾರು 70 ಸಾವಿರ ಮೌಲ್ಯದ ಚಿನ್ನಾಭರಣ, 20 ಸಾವಿರ ಮೌಲ್ಯದ ಬೆಳ್ಳಿ ದೀಪದ ಸ್ತಂಭಗಳು ಸೇರಿ ಒಂದು ಲಕ್ಷಕ್ಕೂ ಹೆಚ್ಚಿನ ನಗ,ನಾಣ್ಯಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ. ರಾಮಕೃಷ್ಣ ಅವರು ಮನೆಗೆ ಬೀಗಹಾಕಿಕೊಂಡು ಕೋಲಾರದ ತಂಗಿ ಮನೆಗೆ ಹೋಗಿ ಬರುವವೇಳೆಯಲ್ಲಿ ಘಟನೆ ನಡೆದ್ದಿದ್ದು, ಈ ಬಗ್ಗೆ ನಂಗಲಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net