

ಮುಂಡಗೋಡ: ತಾಲೂಕಿನ ಗುಂಜಾವತಿ ಅರಣ್ಯದಿಂದ ಲಕ್ಷಾಂತರ ರೂ. ಬೆಲೆ ಬಾಳುವ ಸಾಗವಾನಿ ಮರಗಳನ್ನು ಕಟಾವ್ ಮಾಡಿ ಸಾಗಿಸಲು ವಿಫಲ ಯತ್ನಿಸಿದ ಇಬ್ಬರು ಅಂತರ್ ಜಿಲ್ಲಾ ಅರಣ್ಯಗಳ್ಳರನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಾಹನ ಸಮೇತ ಭಾನುವಾರ ವಶಕ್ಕೆ ಪಡೆದರು.
ಶಿವಮೋಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಇನಾಮಮುತ್ತಳ್ಳಿ ಗ್ರಾಮದ ಕರೆಪ್ಪ ದುಗ್ಗಪ್ಪ ಹುಬ್ಬಳ್ಳಿ , ಏಕಾಂತ ಲಕ್ಷ್ಮಪ್ಪ ಹುಲ್ಲತ್ತಿ ಬಂಧಿತರು.
ಘಟನೆಯ ವಿವರ: ಜೂನ್ 12ರಂದು ತಾಲೂಕಿನ ಗುಂಜಾವತಿ ಅರಣ್ಯದಲ್ಲಿ ಬೆಲೆ ಬಾಳುವ ಮೂರು ಸಾಗುವಾನಿ ಮರಗಳನ್ನು ಕಟಾವ್ ಮಾಡಿ ಹನ್ನೆರಡು ತುಂಡುಗಳನ್ನು ಮಾಡಿ ಮಹಿಂದ್ರಾ ಪಿಕಪ್ ವಾಹನದಲ್ಲಿ ಸಾಗಿಸಲು ಯತ್ನಿಸಿದ್ದರು.
ಈ ವೇಳೆ ವಾಹನದ ಚಕ್ರ ಮಣ್ಣಲ್ಲಿ ಸಿಲುಕಿದ ಪರಿಣಾಮ ಕಟ್ಟಿಗೆಯ ತುಂಡುಗಳನ್ನು ರಸ್ತೆಯ ಪಕ್ಕದಲ್ಲಿ ಬಿಸಾಕಿ ಪರಾರಿಯಾಗಿದ್ದರು.
ಈ ಕುರಿತು ಅರಣ್ಯ ಇಲಾಖೆಯವರು ಸ್ಥಳಕ್ಕೆ ತೆರಳಿ ನಾಟಾಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.
ಭಾನುವಾರ ವಾಹನ ಸಮೇತ ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳು ಈ ಹಿಂದೆ ಮುಂಡಗೋಡ, ಕಾತೂರ, ಮಂಚಿಕೇರಿ ಸೇರಿದಂತೆ ವಿವಿಧ ಭಾಗಗಳಿಂದ ಮರಗಳನ್ನು ಕಡಿದು ಬೇರೆ ಜಿಲ್ಲೆಗಳಿಗೆ ಸಾಗಾಟ ಮಾಡಿರುವುದು ತನಿಖೆಯ ವೇಳೆ ತಿಳಿದು ಬಂದಿದೆ ಎಂದು ಯಲ್ಲಾಪುರ ಡಿಎಫ್‌ಒ ಎಸ್.ಜಿ. ಹೆಗಡೆ ತಿಳಿಸಿದರು.
ಡಿಎಫ್‌ಒ ಎಸ್.ಜಿ.ಹೆಗಡೆ, ಎಸಿಎಫ್.ಎಸ್.ಎಂ.ವಾಲಿ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ. ಸುರೇಶ ಕಲ್ಲೋಳ್ಳಿ, ಉಪ ವಲಯ ಅರಣ್ಯಾಧಿಕಾರಿಗಳಾದ ಶ್ರೀಶೈಲ ಐನಾಪುರ, ಫಕೀರೇಶ ಸುಣಗಾರ, ಸಂತೋಷ ಕುರಬರ, ಅನಿತಾ ಬಿ.ಎಂ, ಶಂಕರ ಬಾಗೇವಾಡಿ, ಚಂದ್ರಕಾಂತ ಮುಕ್ರಿ, ಅರಣ್ಯ ಪಾಲಕರಾದ ಶ್ರೀಧರ ಭಜಂತ್ರಿ, ದೇವರಾಜ ಆಡಿನ್, ಸಾಗರ ಕೊಣ್ಣುರ, ಮುಸ್ತಾಕಲಿ ಒಂಟಿ, ಮುತ್ತಣ್ಣ ಹಿರೇಕಣಗಿ, ಶಿವಪ್ಪ, ವಾಚರ್‌ಗಳಾದ ಅಶೋಕ, ಬಸವರಾಜ, ಶಿವಾನಂದ ಲಮಾಣಿ ಇತರರು ಕಾರ್ಯಾಚರಣೆಯಲ್ಲಿ ಇದ್ದರು.