ಮೂವರು ದ್ವಿಚಕ್ರ ವಾಹನ ಕಳ್ಳರ ಬಂಧನ

Arrest Kaidhi
Published on

ಬೆಂಗಳೂರು: ದ್ವಿಚಕ್ರವಾಹನ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕಾಟನ್‌ಪೇಟೆ ಪೊಲೀಸರು ಬಂಧಿಸಿದ್ದಾರೆ.
ಕೋಲಾರ ಮೂಲದ ಮೊಹಮ್ಮದ್ ಆಸೀಪ್(೨೭), ಮೊಹಮ್ಮದ್ ವಾಸೀಂ(೨೨), ಸೈಯಾದ್ ಆಸೀಪ್(೨೫) ಬಂಧಿತರು. ಆರೋಪಿಗಳಿಂದ ೨೨.೩೦ ಲಕ್ಷ ರೂ. ಬೆಲೆ ಬಾಳುವ ೩೧ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಇತ್ತೀಚೆಗೆ ಕಾಟನ್‌ಪೇಟೆ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನವೊಂದನ್ನು ಕಳ್ಳತನ ಮಾಡಿ ಆ ವಾಹನವನ್ನು ಬೇರೆ ಕಡೆ ಮಾರಾಟ ಮಾಡಲು ಯತ್ನಿಸುತ್ತಿರುವ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಟನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ದ್ವಿಚಕ್ರ ವಾಹನ ಕಳವು ಪ್ರಕರಣ ಹೆಚ್ಚಾಗಿರುವುದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ವಿಶೇಷ ತಂಡವೊಂದನ್ನು ರಚಿಸಿ ವಿಶೇಷ ಗಸ್ತು ಮಾಡಲು ನಿಯೋಜಿಸಲಾಗಿತ್ತು. ಈ ತಂಡ ಆರೋಪಿಗಳ ಮಾಹಿತಿಯನ್ನು ಕಲೆ ಹಾಕಿತ್ತು. ಅ.೨ ರಂದು ಆರೋಪಿಗಳು ಕಳ್ಳತನ ಮಾಡಿದ್ದ ವಾಹನವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಿ ಬಂಧಿಸಲಾಯಿತು.
ವಿಚಾರಣೆ ವೇಳೆ ಆರೋಪಿಗಳು ಹಲವಾರು ತಿಂಗಳಿನಿಂದ ಕೋಲಾರದ ಮುಳಬಾಗಿಲಿನಿಂದ ಬಸ್‌ಗಳ ಮೂಲಕ ಬೆಂಗಳೂರಿಗೆ ಬಂದು ರಾತ್ರಿ ಸಮಯದಲ್ಲಿ ಕಾಟನ್‌ಪೇಟೆ, ಕಲಾಸಿಪಾಳ್ಯ ಸಿಟಿ ಮಾರ್ಕೆಟ್, ಚಾಮರಾಜಪೇಟೆ, ಹೆಬ್ಬಾಳ ಹಾಗೂ ಇತರೆ ಪ್ರದೇಶಗಳಲ್ಲಿ ವಾಹನಗಳನ್ನು ಮುಳಬಾಗಿಲಿಗೆ ಕದ್ದೊಯ್ದು ಮಾರಾಟ ಮಾಡುತ್ತಿದ್ದುದ್ದಾಗಿ ಬಾಯ್ಬಿಟ್ಟಿದ್ದರು.
31 ವಾಹನ ಕಳವು ಪ್ರಕರಣ ಬೆಳಕಿಗೆ:
ಆರೋಪಿಗಳ ಬಂಧನದಿಂದ ಕಾಟನ್‌ಪೇಟೆಯ 2 ದ್ವಿಚಕ್ರ ವಾಹನ ಕಳವು ಪ್ರಕರಣ ಒಂದು ಮನೆ ಕಳವು ಪ್ರಕರಣ, ಕಲಾಸಿಪಾಳ್ಯ, ಸಿಟಿಮಾರ್ಕೆಟ್, ಚಾಮರಾಜಪೇಟೆ ತಲಾ 2 ಪ್ರಕರಣ ಹಾಗೂ ಹೆಬ್ಬಾಳ ಹಲಸೂರು, ಕೋಲಾರ ಟೌನ್, ಶ್ರೀನಿವಾಸಪುರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿದ್ದು, ಒಟ್ಟು 31 ವಾಹನಗಳ ಕಳವು ಪ್ರಕರಣ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net