ದಿನಸಿ ಅಂಗಡಿಗಳಲ್ಲಿ ಕಳ್ಳತನ ಮಾಡುತ್ತಿದ್ದ ಮೂವರು ಅಂದರ್: ಕೆ.ಎಂ.ದೊಡ್ಡಿ ಪೊಲೀಸರ ಕಾರ್ಯಾಚರಣೆ

Arrest
Published on

ಮಂಡ್ಯ: ದಿನಸಿ ಅಂಗಡಿಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಮೂವರನ್ನು ಜಿಲ್ಲೆಯ ಕೆ.ಎಂ.ದೊಡ್ಡಿ ಠಾಣೆ ಪೋಲಿಸರು ಬಂಧಿಸಿದ್ದಾರೆ.

ಮೈಸೂರಿನ ಶಾಂತಿನಗರ ನಿವಾಸಿಗಳಾದ ನವಾಜ್ ಖಾನ್, ಅಬೀದ್ ಅಹಮದ್ ಹಾಗೂ ಶಬ್ಬೀರ್ ಖಾನ್ ಬಂಧಿತರು. ಏ.1ರಂದು ಮುಂಜಾನೆ ವಿಶೇಷ ಗಸ್ತಿನಲ್ಲಿದ್ದ ಕೆ.ಎಂ.ದೊಡ್ಡಿಯಲ್ಲಿ ಪೊಲೀಸರು ಇನ್ನೊವಾ ಕಾರನ್ನು ತಡೆದು ಪರಿಶೀಲಿಸಿದಾಗ ಅದರಲ್ಲಿದ್ದ ಮೂವರು ಸಂಶಯಾಸ್ಪದ ವಸ್ತುಗಳನ್ನು ಇಟ್ಟುಕೊಂಡಿದ್ದರು. ಅವರನ್ನು ಕೂಲಂಕುಷವಾಗಿ ವಿಚಾರಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. 

ಮೂವರು ಮಾ.23ರಂದು ರಾತ್ರಿ ಕೆ.ಎಂ.ದೊಡ್ಡಿ ಟೌನ್ ಮಂಡ್ಯ ರಸ್ತೆಯಲ್ಲಿರುವ ಚಂದ್ರಣ್ಣ ಕಾಂಪ್ಲೆಕ್ಸ್‌ನಲ್ಲಿರುವ ದೀಕ್ಷಾ ಮಾರ್ಟ್ ದಿನಸಿ ಅಂಗಡಿಯಲ್ಲಿ ಕಳ್ಳತನ ಮಾಡಿರುವುದು ಮತ್ತು ಮಾ.17ರಂದು ರಾತ್ರಿ ಕೆ.ಆರ್.ಪೇಟೆ ಟೌನ್ ನಲ್ಲಿ ರಾಮಲಿಂಗೇಶ್ವರ ದಿನಸಿ ಅಂಗಡಿಯಲ್ಲಿ ಕಳ್ಳತನ ಮಾಡಿರುವುದು ವಿಚಾರಣೆ ಸಂದರ್ಭದಲ್ಲಿ‌ ಕಂಡು ಬಂದಿದೆ.

ಮೂವರು ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಒಂದು ಇನ್ನೋವಾ ಕಾರು, ಕಳ್ಳತನ ಮಾಡಿದ್ದ ಕಂಪ್ಯೂಟರ್ ಉಪಕರಣ ಮತ್ತು ಅಂದಾಜು 1,20,000 ರೂ ಬೆಲೆ ಬಾಳುವ ದಿನಸಿ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆ ನಡೆಸಿ ಪ್ರಕರಣ ಬೇಧಿಸಿದ ಮಳವಳ್ಳಿ ಡಿವೈಎಸ್‌ಪಿ ಕೃಷ್ಣಪ್ಪ ನೇತೃತ್ವದಲ್ಲಿ ಕೆ.ಎಂ.ದೊಡ್ಡಿ ಠಾಣೆಯ ಆರಕ್ಷಕ ನಿರೀಕ್ಷಕ ಎಸ್.ಆನಂದ್, ಪಿಎಸ್‌ಐಗಳಾದ ಭೀಮಪ್ಪ ಎಸ್.ಬಾಣಸಿ, ಇಷರತ್ ಬೇಗಂ ಮತ್ತು ಸಿಬ್ಬಂದಿ ವಿಠಲ್ ಜೆ.ಕರಿಗಾರ್, ಅರುಣ್, ಸುಬ್ರಮಣಿ, ನಟರಾಜ್ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net