ಚಿನ್ನಾಭರಣ ದೋಚಿದ್ದ ಮೂವರ ಬಂಧನ

anavatti police station
ಆನವಟ್ಟಿ ಪೊಲೀಸರು ಕಳ್ಳರನ್ನು ಬಂಧಿಸಿ ಚಿನ್ನಾಭರಣ ಜಪ್ತಿ ಮಾಡಿದರು.
Published on

ಶಿವಮೊಗ್ಗ: ಆನವಟ್ಟಿ ಪಟ್ಟಣದಲ್ಲಿ ಮನೆ ಬಾಗಿಲು ಬೀಗ ಮುರಿದು ಒಳ ನುಗ್ಗಿ ಚಿನ್ನಾಭರಣ ದೋಚಿದ್ದ ಮೂವರನ್ನು ಬಂಧಿಸಿರುವ ಪೊಲೀಸರು, ಶಿವಮೊಗ್ಗ, ಉತ್ತರ ಕನ್ನಡ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿನ ಆರು ಪ್ರಕರಣಗಳನ್ನು ಭೇದಿಸಿದ್ದಾರೆ.

ಸೊರಬ ತಾಲೂಕಿನ ಬತಗಟ್ಟೆಯ ಇರ್ಷಾದ್(28), ಶಿಕಾರಿಪುರದ ಖವಾಸ್‌ಪುರದ ಇಸ್ಮಾಯಿಲ್(24) ಮತ್ತು ಸಾಗರ ಪಟ್ಟಣದ ಎಸ್.ಎನ್.ಫಯಾಸ್ (42) ಬಂಧಿತರು. 2022ರ ಜು.23ರಂದು ಆನವಟ್ಟಿ ಆಜಾದ್ ನಗರದ ಜಾಫರ್ ಎಂಬುವರ ಮನೆಗೆ ಕನ್ನ ಹಾಕಿದ್ದ ಬಗ್ಗೆ ಆನವಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಶಿಕಾರಿಪುರ ಡಿವೈಎಸ್ಪಿ ಶಿವಾನಂದ ಮದರಖಂಡಿ, ಸೊರಬ ಸಿಪಿಐ ರಾಜಶೇಖರ್ ಮೇಲ್ವಿಚಾರಣೆಯಲ್ಲಿ ಪಿಎಸ್‌ಐಗಳಾದ ರಾಜು ರೆಡ್ಡಿ ಬೆನ್ನೂರು ಮತ್ತು ವಿಠಲ್ ಎಂ ಅಗಾಸಿ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಬಂಗಾರಪ್ಪ, ಗಿರೀಶ್, ಹರೀಶ್, ಖಲಂದರ್, ಕುಮಾರ, ಸಿದ್ದೇಶ್, ಲೋಕನಾಯ್ಕ್, ಜಗದೀಶ್, ಮಂಜುನಾಥ್ , ಮಲ್ಲೇಶ್, ಹರಿಪ್ರಸಾದ್, ಪ್ರಕಾಶ್, ರಾಜು ನಾಯ್ಕ್, ಕೃಷ್ಣ, ಇಂದ್ರೇಶ್, ಗುರುರಾಜ್, ವಿಜಯ್ ಕುಮಾರ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ಬಂಧಿತರು ಆನವಟ್ಟಿ ಠಾಣೆ ವ್ಯಾಪ್ತಿಯಲ್ಲಿ 4 ಮನೆಗಳ್ಳತನ, ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಠಾಣೆ ವ್ಯಾಪ್ತಿಯಲ್ಲಿ ಒಂದು ಡಕಾಯತಿ, ದಾವಣಗೆರೆ ಜಿಲ್ಲೆಯ ವಿದ್ಯಾನಗರ ಠಾಣೆ ವ್ಯಾಪ್ತಿಯಲ್ಲಿ ಒಂದು ಬೈಕ್ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದು ಈ ಪ್ರಕರಣಗಳಿಗೆ ಸಂಬಂಧಿಸಿದಂತೆ 9,69,300 ರೂ. ಮೌಲ್ಯದ 196 ಗ್ರಾಂ ತೂಕದ ಬಂಗಾರದ ಆಭರಣ, 11,700 ರೂ. ಮೌಲ್ಯದ 180 ಗ್ರಾಂ ತೂಕದ ಬೆಳ್ಳಿಯ ಆಭರಣ, 1.50 ರೂ. ನಗದು ಮತ್ತು 1.50 ಲಕ್ಷ ರೂ. ಮೌಲ್ಯದ 3 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net