ಮೂವರು ಖದೀಮರ ಬಂಧನ, 18 ಲಕ್ಷ ರೂ. ಮೌಲ್ಯದ ಚಿನ್ನಾಭರಣ,ಬೆಳ್ಳಿ ಪದಾರ್ಥ ವಶ

Arrest crime
Published on

ಮನೆಗಳಿಗೆ ಕನ್ನ ಹಾಕುತ್ತಿದ್ದ ಮೂವರು ಖದೀಮರನ್ನು ಬಂಧಿಸಿರುವ ಜಿಲ್ಲಾ ಪೊಲೀಸರು ಬಂಧಿತರಿಂದ 18 ಲಕ್ಷ ರೂ. ಮೌಲ್ಯದ 289 ಗ್ರಾಂ ಚಿನ್ನಾಭರಣ, 2.4 ಕೆಜಿ ಬೆಳ್ಳಿ ಪದಾರ್ಥ ವಶಪಡಿಸಿಕೊಂಡಿದ್ದಾರೆ.

ಜಿಲ್ಲೆಯ ವಿವಿಧ ಭಾಗಗಳಲ್ಲಿ ಮನೆಗಳಿಗೆ ಕನ್ನ ಹಾಕಿ ಚಿನ್ನಾಭರಣ ಸೇರಿದಂತೆ ನಗದು ದೋಚುತ್ತಿದ್ದ ಹಾಸನ ಜಿಲ್ಲೆಯ ಚನ್ನರಾಯಪ್ಪಣ್ಣದ ಮಂಜುನಾಥ್ ಅಲಿಯಾಸ್ ಚೂಟಿ ಮಂಜು(40), ಮುರುಗೇಶ್ ಅಲಿಯಾಸ್ ಕಪ್ಪೆ (40), ಹುಣಸೂರಿನ ಗೋಪಿಕೃಷ್ಣ ಅಲಿಯಾಸ್ ಗೋಪಿ(58) ಎಂಬ ಖದೀಮರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬಂಧಿಸಿದ್ದು ಹೀಗೆ..: ಹುಣಸೂರು ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯ ಮಾರುತಿ ಬಡಾವಣೆ ಮತ್ತು ಮಂಜುನಾಥ ಬಡಾವಣೆಗಳಲ್ಲಿ ರಾತ್ರಿ ಕಳವು ಪ್ರಕರಣಗಳು ಆಗಿದ್ದವು. ಈ ಸಂಬಂಧ ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಮೇ ತಿಂಗಳಿನಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿದ್ದವು. ಪ್ರಕರಣಗಳ ಪತ್ತೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ.ನಂದಿನಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಕಾರ್ಯಾಚರಣೆ ನಡೆಸಿದ ತಂಡವು ಮೂವರು ಆರೋಪಿಗಳನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳ ವಿರುದ್ಧ ಹುಣಸೂರು ಪಟ್ಟಣ ಠಾಣೆಯಲ್ಲಿ 5, ಪಿರಿಯಾಪಟ್ಟಣ ಠಾಣೆಯಲ್ಲಿ 1, ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ 1 ಸೇರಿ ಒಟ್ಟು ಮೈಸೂರು ಜಿಲ್ಲೆಯಲ್ಲಿ 7 ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದೆ ಎಂದರು.
ಬಂಧಿತರಿಂದ 18 ಲಕ್ಷ ರೂ. ಮೌಲ್ಯದ 289 ಗ್ರಾಂ ಚಿನ್ನಾಭರಣ, 2.4 ಕೆಜಿ ಬೆಳ್ಳಿ ಪದಾರ್ಥ ಹಾಗೂ ಮನೆಗಳ ಬಾಗಿಲ ಲಾಕ್ ಮುರಿಯಲು ಬಳಸುತ್ತಿದ್ದ ಸಾಮಗ್ರಿ ವಶಕ್ಕೆ ಪಡೆಯಲಾಗಿದೆ. ಕಳವು ಮಾಡಿದ ಸ್ವತ್ತನ್ನು ಗಿರವಿ ಇಡಲು ಹೋಗುವ ವೇಳೆ ಇಬ್ಬರನ್ನು ಹುಣಸೂರಿನಲ್ಲಿ ಮತ್ತು ಒಬ್ಬರನ್ನು ಕೆ.ಆರ್. ನಗರದಲ್ಲಿ ಬಂಧಿಸಲಾಗಿದೆ ಎಂದು ಸೀಮಾ ಲಾಟ್ಕರ್ ತಿಳಿಸಿದರು.


ಮೂವರು ಆರೋಪಿಗಳು ಹಳೆಯ ಕಳ್ಳರೇ ಆಗಿದ್ದಾರೆ. ಬೇರೆ ಜಿಲ್ಲೆಗಳಲ್ಲಿ ಇವರ ವಿರುದ್ಧ ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ವಿಚಾರಣಾಧೀನ ಕೈದಿಗಳಾಗಿದ್ದಾರೆ. ಇವರಲ್ಲಿ ಇಬ್ಬರು ಜ್ಯುಡಿಷಿಯಲ್ ಕಸ್ಟಡಿಯಲ್ಲಿ ಶಿಕ್ಷೆ ಅನುಭವಿಸಿ ಹೊರಗೆ ಬಂದಿದ್ದಾರೆ. ಜತೆಗೆ ಈ ಮೂವರು ಜೈಲಿನಲ್ಲಿರುವಾಗಲೇ ಸ್ನೇಹಿತರಾಗಿದ್ದವರು ಎಂದು ವಿವರಿಸಿದರು.


ಮಧ್ಯಮ ವರ್ಗದ ಕುಟುಂಬಗಳ ಮನೆಯಗಳನ್ನೇ ಗುರಿಯಾಗಿಸಿಕೊಳ್ಳುತ್ತಿದ್ದ ಖದೀಮರ ತಂಡ ಯಾವ ಮನೆಯ ಲಾಕ್ ಆಗಿದೆ ಎಂಬುದನ್ನು ಪತ್ತೆ ಮಾಡಿಕೊಂಡು ರಾತ್ರಿ ವೇಳೆ ಕಬ್ಬಿಣದ ಸಲಕರಣೆಗಳನ್ನು ಬಳಸಿಕೊಂಡು, ಮನೆಯ ಮುಂಬಾಗಿಲ ಬೀಗ ಮುರಿದು ಕಳ್ಳತನ ಮಾಡುತ್ತಿದ್ದರು ಎಂದು ವಿಚಾರಣೆಯಿಂದ ತಿಳಿದು ಬಂದಿದೆ ಎಂದರು.


ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಡಾ.ನಂದಿನಿ, ಹುಣಸೂರು ಉಪವಿಭಾಗ ಡಿಎಸ್ಪಿ ಎಂ.ಕೆ.ಮಹೇಶ್, ಹುಣಸೂರು ಪಟ್ಟಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಎಸ್.ಎಂ. ದೇವೇಂದ್ರ, ಎಎಸ್‌ಐ ಪುಟ್ಟನಾಯಕ, ಸಿಬ್ಬಂದಿ ಇದ್ದರು.

ಜಿಲ್ಲೆಯಲ್ಲಿವೆ 28 ಬ್ಲಾಕ್ ಸ್ಪಾಟ್

ಇತ್ತೀಚೆಗೆ ತಿ.ನರಸೀಪುರದ ಮೂಗೂರು ಬಳಿಯ ಹೆದ್ದಾರಿಯಲ್ಲಿ ನಡೆದಿದ್ದ ಅಪಘಾತಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹೈವೇಯಲ್ಲಿ ಅಪಘಾತ ತಡೆಗೆ ತಕ್ಷಣಕ್ಕೆ ಮತ್ತು ದೀರ್ಘಕಾಲಿಕವಾಗಿ ಏನು ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಅಗತ್ಯ ಸಲಹೆ ನೀಡಿದ್ದೇವೆ. ಜತೆಗೆ ಪೊಲೀಸ್ ಇಲಾಖೆಯಿಂದ ಜಿಲ್ಲೆಯಲ್ಲಿ 28 ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ಅಪಘಾತ ತಡೆಗೆ ಮುನ್ನೆಚ್ಚರಿಕೆ ವಹಿಸಲು ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಸೀಮಾ ಲಾಟ್ಕರ್ ತಿಳಿಸಿದರು.

ಸಾರ್ವಜನಿಕರು ಹಲವು ದಿನಗಳ ಮಟ್ಟಿಗೆ ಮನೆಗೆ ಬೀಗ ಹಾಕಿ ಬೇರೆಡೆಗೆ ತೆರಳುವಾಗ ಮುಂಚಿತವಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಮನೆಯ ಬೀಗ ಹಾಕಿರುವುದು, ಮನೆಗೆ ಹಾಕಲಾಗಿದ್ದ ಪೇಪರ್, ಹಾಲಿನ ಪ್ಯಾಕೇಟ್ ಬಿದ್ದಿದ್ದಲ್ಲೇ ಬಿದ್ದಿರುವುದು, ಮನೆಯ ಮುಂಬಾಗಿಲ ಕಸ ಗುಡಿಸದೇ ಇರುವುದನ್ನು ಗಮನಿಸುವ ಖದೀಮರು ಮನೆ ಕಳ್ಳತನಕ್ಕೆ ಮುಂದಾಗುತ್ತಾರೆ. ಸಾರ್ವಜನಿಕರು ಮೊದಲೇ ಮಾಹಿತಿ ನೀಡಿದರೆ ಅಂತಹ ಸಮಯದಲ್ಲಿ ಪೊಲೀಸ್ ಗಸ್ತನ್ನು ಅಲ್ಲಿ ಹೆಚ್ಚಿಸಲು, ಗಮನ ಇಡಲು ಅನುಕೂಲವಾಗುತ್ತದೆ. ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net