ಕೊಲೆ ಪ್ರಕರಣದ ಮೂವರು ಆರೋಪಿಗಳ ಬಂಧನ

IMG-20241204-WA0014.jpg
Published on

ಬೆಳಗಾವಿ: ಅಥಣಿ ತಾಲೂಕು ವ್ಯಾಪ್ತಿಯ ಕೃಷ್ಣಾ ನದಿಯಲ್ಲಿ 11 ತಿಂಗಳ ಹಿಂದೆ ವ್ಯಕ್ತಿಯೊಬ್ಬರನ್ನು ಮುಳುಗಿಸಿ ಕೊಲೆ ಮಾಡಿದ ಪ್ರಕರಣವನ್ನು ಹಾರೂಗೇರಿ ಠಾಣೆ ಪೊಲೀಸರು ಭೇದಿಸಿದ್ದು, ಈ ಸಂಬಂಧ ಮೃತನ ಪತ್ನಿ, ಅವಳ ಪ್ರಿಯಕರ ಸೇರಿ ಮೂವರನ್ನು ಹಾರೂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರ ಡಿಸೆಂಬರ್ 27ರಂದು ಕೃಷ್ಣಾ ನದಿಯಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿತ್ತು. ಈ ಮಧ್ಯೆ, ರಾಯಬಾಗ ತಾಲೂಕಿನ ಇಟನಾಳದಲ್ಲಿ ಯುವಕನೊಬ್ಬ ಕಾಣೆಯಾಗಿರುವ ವಿಷಯ ತಿಳಿಯಿತು. ಆದರೆ, ಕಾಣೆಯಾಗಿರುವ ಬಗ್ಗೆ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿರಲಿಲ್ಲ. ಶವ ಪತ್ತೆ ಜಾಡು ಹಿಡಿದು, ತನಿಖೆ ಕೈಗೊಂಡಾಗ ಕೃಷ್ಣಾ ನದಿಯಲ್ಲಿ ಮೃತಪಟ್ಟಿದ್ದು ಮಲ್ಲಪ್ಪ ಕಂಬಾರ ಎಂದು ಗೊತ್ತಾಯಿತು. ಮಲ್ಲಪ್ಪ ಅವರ ಪತ್ನಿ ದಾನವ್ವ, ಅವಳ ಪ್ರಿಯಕರ ಪ್ರಕಾಶ ಬೆನ್ನಾಳಿ, ರಾಮಪ್ಪ ಮಾದರ ಕೃಷ್ಣಾ ನದಿಯಲ್ಲಿ ಮಲ್ಲಪ್ಪನನ್ನು ಮುಳುಗಿಸಿ ಕೊಲೆ ಮಾಡಿದ್ದಾರೆ ಎಂಬುವುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ತಿಳಿಸಿದರು.

ಒಂದೂವರೆ ವರ್ಷದ ಹಿಂದೆ ದಾನವ್ವ ಕಾಣೆಯಾದ ಕುರಿತು ಅವರ ತಂದೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದಾನವ್ವ ಪ್ರಕಾಶ ಬೆನ್ನಾಳಿ ಜತೆ ಓಡಿಹೋಗಿದ್ದು ಪತಿ ಮಲ್ಲಪ್ಪ ಅವರಿಗೆ ತಿಳಿಯಿತು. ಕೆಲ ದಿನಗಳ ನಂತರ ದಾನವ್ವ ಮನೆಗೆ ವಾಪಸ್ ಆಗಿದ್ದರು. ಓಡಿ ಹೋಗಿದ್ದ ವಿಚಾರಕ್ಕೆ ಮನೆಯಲ್ಲಿ ದಂಪತಿ ಮಧ್ಯೆ ಪ್ರತಿದಿನವೂ ಗಲಾಟೆಯಾಗುತ್ತಿತ್ತು. ಪತ್ನಿಯ ಸಹವಾಸ ಬಿಡುವಂತೆ ಪ್ರಕಾಶನಿಗೆ ಮಲ್ಲಪ್ಪ ಎಚ್ಚರಿಕೆ ಕೊಟ್ಟಿದ್ದರು. ಹಾಗಾಗಿ ದಾನವ್ವ ಮತ್ತು ಪ್ರಕಾಶನು ರಾಮಪ್ಪ ಎಂಬುವನ ನೆರವಿನಿಂದ ಕಳೆದ ಡಿಸೆಂಬರ್‌ನಲ್ಲಿ ಮಲ್ಲಪ್ಪನನ್ನು ಕೊಲೆ ಮಾಡಿದ್ದಾರೆ ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net