

ಶಿವಮೊಗ್ಗ: ಸಾಗರ ತಾಲೂಕಿನ ಆನಂದಪುರ ಬಳಿ 2 ಲಕ್ಷ ರೂ. ಮೌಲ್ಯದ ರೈಲ್ವೆ ಒಎಚ್‌ಇ(ಓವರ್ ಹೆಡ್ ಇಕ್ಯೂಪ್‌ಮೆಂಟ್) ತಾಮ್ರದ ತಂತಿ ಕಳವು ಮಾಡಿದ್ದ ಮೂವರು ಹಾಗೂ ಖರೀದಿಸಿದ್ದ ಇಬ್ಬರು ಅಂಗಡಿ ಮಾಲೀಕರನ್ನು ಮೈಸೂರು ರೈಲ್ವೆ ರಕ್ಷಣಾ ವಿಶೇಷ ತಂಡ ಬುಧವಾರ ಬಂಧಿಸಿದೆ.
ತಾಲೂಕಿನ ಕುಂಸಿ ಗ್ರಾಮದ ನೂರುಲ್ಲಾ, ಮಂಜು ಮತ್ತು ಹರೀಶ್ ಕದ್ದವರು. ಶಿವಮೊಗ್ಗದ ನಗರದ ಐಶ್ವರ್ಯ ಸ್ಟೀಲ್ಸ್ ಮಾಲೀಕ ನಾರಾಯಣ, ಸ್ವಸ್ತಿಕ್ ಸ್ಟೀಲ್ಸ್ ಮಾಲೀಕ ಜ್ಞಾನೇಶ್ವರ ಖರೀದಿಸಿದವರು. ಬಂಧಿತರಿಂದ 200 ಕೆಜಿ ತಾಮ್ರದ ತಂತಿ, ಟಾಟಾ ಏಸ್, ಬೈಕ್, ಕಟ್ಟರ್ ಮತ್ತು ಲ್ಯಾಡರ್ ಟ್ರಾಲಿ, ರೈಲ್ವೆ ವಿದ್ಯುದ್ದೀಕರಣ ಉಪಕರಣವನ್ನು ವಶಪಡಿಸಿಕೊಳ್ಳಲಾಗಿದೆ.
ಮೈಸೂರು ಅಪರಾಧ ವಿಭಾಗದ ನಿರೀಕ್ಷಕ ಎಂ.ನಿಶಾದ್ ನೇತೃತ್ವದಲ್ಲಿ ರೈಲ್ವೆ ರಕ್ಷಣಾ ಪಡೆಯ ವಿಶೇಷ ತಂಡ ಬುಧವಾರ ರಾತ್ರಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಸೆ.6 ಮತ್ತು 7ರಂದು ರಾತ್ರಿ 2 ಲಕ್ಷ ರೂ. ಮೌಲ್ಯದ 260 ಮೀಟರ್ ರೈಲ್ವೆ ಒಎಚ್‌ಇ ತಾಮ್ರದ ತಂತಿಯನ್ನು ಸಾಗರ ಮತ್ತು ಆನಂದಪುರ ನಡುವೆ ಕಳ್ಳತನ ಮಾಡಲಾಗಿತ್ತು. ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶಿಲ್ಪಿ ಅಗರ್ವಾಲ್ ಅವರ ಸೂಚನೆ ಮೇರೆಗೆ ಹುಬ್ಬಳ್ಳಿ ಮತ್ತು ಮೈಸೂರು ವಿಭಾಗೀಯ ರೈಲ್ವೆ ರಕ್ಷಣಾ ಆಯುಕ್ತ ಜೆ.ಕೆ. ಶರ್ಮಾ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದರು.
ಸ್ಥಳೀಯ ಪೊಲೀಸ್ ಮತ್ತು ಆರ್‌ಪಿಎಫ್‌ನ ಶ್ವಾನ ದಳದೊಂದಿಗೆ ಮೈಸೂರು ಅಪರಾಧ ವಿಭಾಗದ ನಿರೀಕ್ಷಕ ಎಂ.ನಿಶಾದ್ ಮತ್ತು ಶಿವಮೊಗ್ಗ ಇನ್‌ಸ್ಪೆಕ್ಟರ್ ಬಿ.ಎನ್.ಕುಬೇರಪ್ಪ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಶಂಕಿತರ ಬಗ್ಗೆ ಮಾಹಿತಿ ಕಲೆ ಹಾಕಿದ್ದ ತಂಡ ಮೊಬೈಲ್ ಕರೆಗಳ ಆಧಾರ ಸೇರಿದಂತೆ ಅವರ ಚಲನವ ಲನಗಳ ಮೇಲೆ ನಿಗಾ ವಹಿಸಿ ಬಂಧಿಸಿದೆ. ಬಂಧಿತರನ್ನು ಸಾಗರದ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದೆ.