

ಮೈಸೂರು: ಚಿನ್ನ ಕಳವು ಮಾಡಿದ್ದ ಆರೋಪಿಗಳು ಹಾಗೂ ಕಾನೂನು ಸಂಘರ್ಷಕ್ಕೊಳಾಗದ ಇಬ್ಬರನ್ನು ವಶ ಪಡೆದಿರುವ ಉದಯಗಿರಿ ಠಾಣೆ ಪೊಲೀಸರು, 1.50 ಲಕ್ಷ ರೂ. ಮೌಲ್ಯದ 24 ಗ್ರಾಂ ತೂಕದ ಚಿನ್ನದ ನೆಕ್ಲೆಸ್, 50 ಸಾವಿರ ರೂ. ನಗದು ಹಣ ವಶ ಪಡಿಸಿಕೊಂಡಿದ್ದಾರೆ.
ರಾಜೀವ್‌ನಗರದ ಕ್ರಿಶ್ಚಿಯನ್ ಕಾಲನಿಯಲ್ಲಿರುವ ಮನೆಯೊಂದರಲ್ಲಿ ಆರೋಪಿಗಳು 24 ಗ್ರಾಂ ಚಿನ್ನದ ನಕ್ಲೆಸ್, 70 ಸಾವಿರ ರೂ. ಕಳ್ಳತನ ಮಾಡಿದ್ದರು. ಈ ಬಗ್ಗೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸೆ.2ರಂದು ರಾಜೀವ್ ನಗರದ ಈಡನ್ ಗಾರ್ಡನ್ ಲೇಔಟ್ ಬಳಿ ಗಸ್ತಿನಲ್ಲಿ ಇರುವಾಗ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮೂವರನ್ನು ವಿಚಾರಿಸಲಾಯಿತು. ಸಮಂಜಸವಾದ ಉತ್ತರ ನೀಡದ ಕಾರಣ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದರು. ಈ ವೇಳೆ ಒಬ್ಬ ವಯಸ್ಕನಾಗಿದ್ದು, ಮತ್ತಿಬ್ಬರು ಅಪ್ರಾಪ್ತರಾಗಿರುವುದರಿಂದ ಆಪ್ತ ಸಮಾಲೋಚನೆಗೆ ಒಳಪಡಿಸಿದಾಗ ಉದಯಗಿರಿ ಠಾಣಾ ವ್ಯಾಪ್ತಿಯ ಕ್ರಿಶ್ಚಿಯನ್ ಕಾಲನಿಯ ಮನೆಯೊಂದರಲ್ಲಿ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡರೆನ್ನಲಾಗಿದೆ.
ದೇವರಾಜ ವಿಭಾಗದ ಎಸಿಪಿ ಶಾಂತಮಲ್ಲಪ್ಪ ನೇತೃತ್ವದಲ್ಲಿ ಉದಯಗಿರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಎನ್. ಸುಧಾಕರ್, ಪಿಎಸ್‌ಐ ಬಿ.ಜಿ.ನಾಗರಾಜು ನಾಯ್ಕ, ಸಿಬ್ಬಂದಿ ಜಿ. ಶಿವಪ್ರಸಾದ್, ಪಿ.ಎನ್.ಸುಹೀಲ್, ಪ್ರಕಾಶ್ ರಾಥೋಡ್, ರಾಜೇಸಾಬ, ಕೆ.ಕರಿಯಪ್ಪ, ನಾಜಿಯಾ ಷರೀಫ್ ಇತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.