ಕಾರು ಅಡ್ಡಗಟ್ಟಿ 14.30 ಲಕ್ಷದ ಸ್ವತ್ತು ದರೋಡೆ ಮಾಡಿದವರ ಬಂಧನ

29 ylp 03 (arrest)
Published on

ಯಲ್ಲಾಪುರ: ತಾಲೂಕಿನ ಬೊಮ್ಮನಹಳ್ಳಿ- ಶಿಡ್ಲಗುಂಡಿ ರಸ್ತೆಯಲ್ಲಿ ಹೋಗುತ್ತಿದ್ದ ಕಾರನ್ನು ತಡೆದು, ನಗದು, ಆಭರಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಿಳಕಿಯ ಮೋತೇಶ ಸಂತಾನ ಸಿದ್ದಿ, ಹುಲಿಯಾ ಲಕ್ಷ್ಮಣ ಸಿದ್ದಿ, ಪ್ರಕಾಶ ಕೃಷ್ಣ ಸಿದ್ದಿ, ಪಿಲೀಪ ಕೃಷ್ಣ ಸಿದ್ದಿ ಬಂಧಿತರು.

ಜೂನ್ 14ರಂದು ಅಂಥೋನಿ ದಿವ್ಯಕುಮಾರ ಪ್ರಾನ್ಸಿಸ್ ಫೆರೆರಾ ಹಾಗೂ ಅವರ ಸ್ನೇಹಿತರು ಕಾರಿನಲ್ಲಿ ಹೋಗುತ್ತಿದ್ದಾಗ ಅವರನ್ನು ತಡೆದು, ಕಪ್ಪು ಅರಿಶಿಣ ವ್ಯಾಪಾರಕ್ಕೆಂದು ಕರೆಸಿಕೊಂಡು ಹಲ್ಲೆ ನಡೆಸಿದ್ದರು. ಅವರಲ್ಲಿದ್ದ ಹಣ, ಆಭರಣ ಹಾಗೂ ಮೊಬೈಲ್ ಸೇರಿ ಒಟ್ಟು 14.30 ಲಕ್ಷ ರೂ ಮೌಲ್ಯದ ಸ್ವತ್ತನ್ನು ದರೋಡೆ ಮಾಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಲಸ್ಕಂಡ ಕ್ರಾಸ್ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ ಬೈಕ್ ಹಾಗೂ ದರೋಡೆ ಮಾಡಿದ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ಎಸ್​ಪಿ ಡಾ. ಸುಮನ ಪನ್ನೇಕರ, ಹೆಚ್ಚುವರಿ ಎಸ್​ಪಿ ಎಸ್. ಬದರಿನಾಥ, ಡಿವೈಎಸ್​ಪಿ ರವಿ ನಾಯ್ಕ ಮಾರ್ಗದರ್ಶನದಲ್ಲಿ ಸಿಪಿಐ ಸುರೇಶ ಯಳ್ಳೂರ ನೇತೃತ್ವದಲ್ಲಿ ಪಿಎಸ್​ಐ ಅಮಿನಾಸಾಬ್ ಎಂ. ಅತ್ತರ, ಎಎಸ್​ಐ ವಿಠಲ್ ಮಾಲವಾಡಕರ್,ಸಿಬ್ಬಂದಿ ಬಸವರಾಜ ಹಗರಿ, ಮಹಮ್ಮದ್ ಶಫಿ, ಗಜಾನನ, ಬಸವರಾಜ ಮಳಗನಕೊಪ್ಪ, ಚನ್ನಕೇಶವ, ಪರಶುರಾಮ, ಅಮರ,ಪರಶುರಾಮ ದೊಡ್ಮನಿ, ನಂದೀಶ, ಸುರೇಶ, ಶೋಭಾ ನಾಯ್ಕ, ಸೀಮಾ ಗೌಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net