

ಕೊಳ್ಳೇಗಾಲ: ತಾಲೂಕಿನ ಕೊಳ್ಳೇಗಾಲ-ಹನೂರು ಮುಖ್ಯ ರಸ್ತೆಯಿಂದ ಲೊಕ್ಕನಹಳ್ಳಿಗೆ ತೆರಳುವ ಜಂಕ್ಷನ್ (ಮಧುವನಹಳ್ಳಿ ಹೊರವಲಯ)ದಲ್ಲಿ ಹುಲಿಯ ಉಗುರುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಸಂಚಾರಿದಳ ಪೊಲೀಸರು ಗುರುವಾರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಹರವೆ ಗ್ರಾಮದ ಬಿ.ಎನ್.ರವಿಕುಮಾರ್, ಎಚ್.ಡಿ.ಕೋಟೆ ತಾಲೂಕಿನ ಆಲನಹಳ್ಳಿ ಗ್ರಾಮದ ಕುಮಾರನಾಯಕ ಬಂಧಿತ ಆರೋಪಿಗಳು.
ಕೊಳ್ಳೇಗಾಲ-ಹನೂರು ಮುಖ್ಯ ರಸ್ತೆಯಿಂದ ಲೊಕ್ಕನಹಳ್ಳಿ ಗ್ರಾಮದ ಕಡೆಗೆ ಬೈಕ್‌ನಲ್ಲಿ ತೆರಳುವ ಸಂದರ್ಭ ಹುಲಿ ಉಗುರುಗಳನ್ನು ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಮಡಿಕೇರಿ ಸಿಐಡಿ ಅರಣ್ಯ ಸಂಚಾರಿ ಘಟಕದ ಪೊಲೀಸ್ ಅಧೀಕ್ಷಕ ಎಸ್.ಎಸ್.ಕಾಶಿ ಅವರ ಮಾರ್ಗದರ್ಶನದಲ್ಲಿ ಕೊಳ್ಳೇಗಾಲ ಸಿಐಡಿ ಅರಣ್ಯ ಸಂಚಾರಿ ದಳದ ಪಿಎಸ್‌ಐ ವಿಜಯ್ ರಾಜ್ ಹಾಗೂ ತಂಡ ದಾಳಿ ನಡೆಸಿ ಪರಿಶೀಲಿಸಿದ್ದಾರೆ.
ಈ ವೇಳೆ ಅವರ ಕೈಯಲ್ಲಿದ್ದ ಪೇಪರ್ ನಿಂದ ಸುತ್ತಿದ್ದ ಪ್ಲಾಸ್ಟಿಕ್ ಕವರ್ ಪರಿಶೀಲಿಸಿದಾಗ 4 ವಿವಿಧ ಅಳತೆಯ ಹುಲಿ ಉಗುರುಗಳು ದೊರೆತಿದೆ. ತಕ್ಷಣ ಮಾಲು ಸಮೇತ ಆರೋಪಿಗಳನ್ನು ಬಂಧಿಸಲಾಗಿದೆ. ಕೊಳ್ಳೇಗಾಲ ಪಟ್ಟಣದಲ್ಲಿರುವ ಅರಣ್ಯ ಸಂಚಾರಿ ದಳ ಕಚೇರಿಯಲ್ಲಿ ಪ್ರಕರಣ ಸಂಬಂಧ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಶೆಡ್ಯೂಲ್ ಕ್ರಸಂ-49 ರ ಕ.ಲಂ 9, 39(ಡಿ) 44, 48(ಎ), 51,57 ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಸಿಐಡಿ ಅರಣ್ಯ ಸಂಚಾರಿ ದಳದ ಕಾನ್‌ಸ್ಟೇಬಲ್ ಶಂಕರ್, ಬಸವರಾಜು, ರಾಮಚಂದ್ರ, ಸ್ವಾಮಿ, ಲತಾ, ಬಸವರಾಜು, ಚಾಲಕ ಪ್ರಭಾಕರ್ ಇದ್ದರು. .