ಮನೆ ಬೀಗ ಮುರಿದು ಕಳ್ಳತನ ಮಾಡುತ್ತಿದ್ದವನ ಬಂಧನ : 2.76 ಲಕ್ಷ ರೂ.ಮೌಲ್ಯದ ಚಿನ್ನಾಭರಣ ವಶ

Arrest Kaidhi
Published on

ಬೆಂಗಳೂರು: ಬೀಗ ಹಾಕಿದ ಮನೆಗಳನ್ನು ಗುರುತಿಸಿಕೊಂಡು ರಾತ್ರಿ ವೇಳೆ ರಾಡ್‌ನಿಂದ ಬಿಗಿದು ಮುರಿದು ಕಳವು ಮಾಡುತ್ತಿದ್ದ ಆರೋಪಿಯನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.


ಕುವೆಂಪುನಗರದ ಸಿಂಗಾಪುರ ಲೇಔಟ್ ನಿವಾಸಿ ಅನಿಲ್ ದೇವ್(೩೪) ಬಂಧಿತ. ಆರೋಪಿಯಿಂದ 2.76 ಲಕ್ಷ ರೂ.ಮೌಲ್ಯದ ೪೦ ಗ್ರಾಂ ತೂಕದ ಚಿನ್ನಾಭರಣ, 113 ಗ್ರಾಂ ಬೆಳ್ಳಿ ವಸ್ತುಗಳು, ೫೪ ಸಾವಿರ ರೂ. ನಗದು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಭೈರವೇಶ್ವರನಗರದ ನಿವಾಸಿ ರಮಾದೇವಿ ಎಂಬುವವರು ತಮ್ಮ ಮಗಳ ಮದುವೆಯ ಆಮಂತ್ರಣ ಪತ್ರ ನೀಡಲು ತೆರಳಿದ್ದರು. ಈ ವೇಳೆ ಮನೆಯ ಬೀಗ ಮುರಿದು ದುಷ್ಕರ್ಮಿಗಳು ಕಳ್ಳತನ ಮಾಡಿದ್ದರು. ಈ ಸಂಬಂಧ ದಾಖಲಾಗಿದ್ದ ದೂರಿನನ್ವಯ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಪ್ರದೇಶ ಮೂಲದ ಆರೋಪಿ ಅನಿಲ್ ದೇವ್ ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾನೆ.

ಕಳೆದ ಐದು ವರ್ಷಗಳಿಂದ ನಗರದ ವಿವಿಧೆಡೆ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದಾನೆ. ವೃತ್ತಿಪರ ಕಳ್ಳನಾಗಿರುವ ಈತನ ವಿರುದ್ಧ ಸೋಲದೇವನಹಳ್ಳಿ, ಬಾಗಲಗುಂಟೆ, ಪೀಣ್ಯ, ಯಶವಂತಪುರ, ಬ್ಯಾಟರಾಯನಪುರ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಕೆಲ ಪ್ರಕರಣಗಳಲ್ಲಿ ಜೈಲು ಸೇರಿದ್ದ ಆರೋಪಿಯು ಜಾಮೀನು ಪಡೆದು ಹೊರಬಂದ ಬಳಿಕವೂ ತನ್ನ ಹಳೇ ಚಾಳಿ ಮುಂದುವರೆಸಿದ್ದ.


ಮನೆಯ ಬೀಗ ಮೀಟಿ ಕಳವು:
ಆರೋಪಿ ಅನಿಲ್ ದೇವ್ ಸಂಜೆ ವೇಳೆ ನಗರದ ವಿವಿಧೆಡೆ ಸುತ್ತಾಡಿ ಬೀಗ ಹಾಕಿದ ಮನೆಗಳನ್ನು ಗುರುತಿಸಿಕೊಂಡು ರಾತ್ರಿ ವೇಳೆ ರಾಡ್‌ನಿಂದ ಆ ಮನೆಯ ಬಾಗಿಲು ಬೀಗ ಮೀಟಿ ಒಳ ಪ್ರವೇಶಿಸಿ, ನಗದು, ಚಿನ್ನಾಣಭರಣ ಸೇರಿ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿಕೊಂಡು ಪರಾರಿಯಾಗುತ್ತಿದ್ದ. ಕದ್ದ ವಸ್ತುಗಳನ್ನು ಪರಿಚಿತರ ಮುಖಾಂತರ ವಿಲೇವಾರಿ ಮಾಡಿಸಿ ಹಣ ಪಡೆದು ಮೋಜಿನ ಜೀವನಕ್ಕೆ ವ್ಯಯಿಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net