ಗಾಂಜಾ ಮಾರುತ್ತಿದ್ದ ಆರೋಪಿಯ ಬಂಧನ

crime
Published on

ಮೈಸೂರು: ಗಡಿಪಾರು ಶಿಕ್ಷೆಗೆ ಒಳಗಾಗಿದ್ದ ಆರೋಪಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಗಾಂಜಾ ಮಾರಾಟ ಮಾಡಲು ಯತ್ನಿಸಿ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ನಗರದ ಮಹಮದ್ ಕರೀಂ ಬಂಧಿತ. ಈ ಹಿಂದೆ ಈತನನ್ನು ಗಾಂಜಾ ಮಾರಾಟ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಹುಬ್ಬಳ್ಳಿ ನಗರಕ್ಕೆ ಗಡಿಪಾರು ಶಿಕ್ಷೆ ವಿಧಿಸಿದ್ದರು. ಮಹಮದ್ ಕರೀಂ ತನ್ನ ಗಡಿಪಾರು ಶಿಕ್ಷೆಗೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಮತ್ತೆ ಮೈಸೂರಿಗೆ ಬಂದಿದ್ದ.

ಏನಿದು ಪ್ರಕರಣ: ಸಿಸಿಬಿ ಠಾಣೆ ಪೊಲೀಸರು ಶುಕ್ರವಾರ ನಗರದ ಈದ್ಗಾ ಸಿವಿ ರಸ್ತೆ ಬಳಿ ಗಸ್ತಿನಲ್ಲಿದ್ದಾಗ ಮಹಮದ್ ಕರೀಂ, ಕೈನಲ್ಲಿ ಚೀಲ ಹಿಡಿದು ಅನುಮಾನಾಸ್ಪದವಾಗಿ ನಿಂತಿದ್ದ. ಪೊಲೀಸರು ಕಂಡ ಕೂಡಲೇ ಗಡಿಬಿಡಿಯಾಗಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಈತನನ್ನು ವಶಕ್ಕೆ ಪಡೆದ ಪೊಲೀಸರು ಪರಿಶೀಲನೆ ನಡೆಸಿದಾಗ ಬ್ಯಾಗ್‌ನಲ್ಲಿ ಗಾಂಜಾ ಇರುವುದು ಬೆಳಕಿಗೆ ಬಂದಿದೆ. ವಿಚಾರಣೆ ನಡೆಸಿದಾಗ ರೆಹಮಾನ್ ಎಂಬಾತನಿಂದ 25 ಸಾವಿರ ರೂ.ಕೊಟ್ಟು ಗಾಂಜಾ ಖರೀದಿಸಿರುವುದಾಗಿ ತಿಳಿಸಿದ್ದಾನೆ.
ಎನ್.ಆರ್.ಪೊಲೀಸ್ ಠಾಣೆಯಲ್ಲಿ ಮಹಮದ್ ಕರೀಂ ಹಾಗೂ ರೆಹಮಾನ್ ವಿರುದ್ಧ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಎರಡನೇ ಆರೋಪಿ ರೆಹಮಾನ್ ತಲೆ ಮರೆಸಿಕೊಂಡಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net