

ಮಡಿಕೇರಿ: ಕೊಡಗು ಜಿಲ್ಲಾ ವ್ಯಾಪ್ತಿ ಹಾಗೂ ನೆರೆಯ ಜಿಲ್ಲೆಗಳ ದೇವಾಲಯದ ಘಂಟೆ ಕಳ್ಳತನ ಮಾಡುತ್ತಿದ್ದ ನಾಲ್ವರು ಅಂತರ ರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ವಿಶೇಷ ತಂಡ ಯಶಸ್ವಿಯಾಗಿದೆ.
ಮೈಸೂರಿನ ಆರ್.ಎಸ್.ನಾಯ್ಡು ನಗರದ ಅಮ್ಜದ್ ಆಹಮ್ಮದ್(೩೭), ಅಜ್ಜು ಲೇಜೌಟ್‌ನ ಸಮಿವುಲ್ಲಾ(೨೨), ಹೈದರ್(೩೬) ಹಾಗೂ ಕೆಸರೆ ನಗರದ ಜುಲ್ಪಿಕರ್(೩೬) ಬಂಧಿತ ಆರೋಪಿಗಳು.
ಕಳವು ಮಾಡಿದ ಸುಮಾರು ೭೫೦ ಕೆ.ಜಿ.ತೂಕದ ವಿವಿಧ ಮಾದರಿಯ ಲೋಹದ ಘಂಟೆಗಳು ಹಾಗೂ ೧ ಕಾರು ಸೇರಿದಂತೆ ಒಟ್ಟು ರೂ.೧೦ ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡು, ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.
ಎಲ್ಲಿಲ್ಲಿ ಕಳ್ಳತನವಾಗಿತ್ತು: ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಮಾಯಮುಡಿ ಕಮಟೆ ಶ್ರೀ ಮಹದೇವ ದೇವಸ್ಥಾನ, ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ನಿಟ್ಟೂರು ಕಾರ್ಮಾಡಿನ ಶ್ರೀ ಕಾಲಭೈರವೇಶ್ವರ ದೇವಸ್ಥಾನ, ಬಿಳೂರಿನ ಕಲ್ಲುಗುಡಿ ಶ್ರೀ ಈಶ್ವರ ದೇವಸ್ಥಾನ, ಬೆಸಗೂರಿನ ಶ್ರೀ ಮಹಾದೇವ ದೇವಸ್ಥಾನ ಮತ್ತು ಶ್ರೀ ದುರ್ಗಿ ದೇವಸ್ಥಾನ ಹಾಗೂ ಹಳ್ಳಿಗಟ್ಟಿನ ಭದ್ರಕಾಳಿ ದೇವಸ್ಥಾನ, ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕರಡ ಮಲೆತಿರಿಕೆ ಈಶ್ವರ ದೇವಸ್ಥಾನ, ಕೆದಮಳ್ಳೂರಿನ ಶ್ರೀ ಮಹದೇವ ದೇವಸ್ಥಾನ, ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಮಕ್ಕಿ ಶಾಸ್ತವು ದೇವಸ್ಥಾನಗಳಿಂದ ಕಳೆದ ೨೦೨೨ನೇ ಸಾಲಿನ ಫೆಬ್ರವರಿ ತಿಂಗಳಿನಿಂದ ಅಕ್ಟೋಬರ್ ತಿಂಗಳಿನವರೆಗೆ ಸುಮಾರು ೮೦೦ ಕೆ.ಜಿ ತೂಕದ ಘಂಟೆಗಳು ಕಳ್ಳತನವಾಗಿತ್ತು. ಈ ಸಂಬಂಧ ಗೋಣಿಕೊಪ್ಪ ಪೊನ್ನಂಪೇಟೆ, ವಿರಾಜಪೇಟೆ ಗ್ರಾಮಾಂತರ ಹಾಗೂ ನಾಪೋಕ್ಲು ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕವಾಗಿ ಒಟ್ಟು ೮ ಪ್ರಕರಣಗಳು ದಾಖಲಾಗಿತ್ತು.
ವಿಶೇಷ ತಂಡ ರಚನೆ: ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಎಂ.ಎ.ಅಯ್ಯಪ್ಪ, ಆರೋಪಿಗಳ ಬಂಧನಕ್ಕೆ ಅಗತ್ಯ ಕ್ರಮ ಕೈಗೊಂಡು ೩೦ ಅಧಿಕಾರಿಗಳ ತಂಡ ರಚನೆ ಮಾಡಿದರು. ವಿರಾಜಪೇಟೆ ಡಿವೈಎಸ್ಪಿ ನಿರಂಜನ್ ರಾಜೇ ಅರಸ್, ಮಡಿಕೇರಿ ಡಿವೈಎಸ್ಪಿ ಗಜೇಂದ್ರ ಪ್ರಸಾದ್, ಗೋಣಿಕೊಪ್ಪ, ಪೊನ್ನಂಪೇಟೆ, ವಿರಾಜಪೇಟೆ, ಶ್ರೀಮಂಗಲ, ಕುಟ್ಟ, ನಾಪೋಕ್ಲು ಹಾಗೂ ಜಿಲ್ಲಾ ಅಪರಾಧ ಪತ್ತೆದಳ ಮತ್ತು ಸಿಡಿಆರ್ ಸೆಲ್ ಸಿಬ್ಬಂದಿಗಳನ್ನು ಒಳಗೊಂಡಂತೆ ಒಟ್ಟು ೩೦ ಜನ ಅಧಿಕಾರಿ ಹಾಗೂ ಸಿಬ್ಬಂದಿಗಳ ಪ್ರತ್ಯೇಕ ತಂಡಗಳನ್ನು ರಚಿಸಲಾಯಿತು. ೩ ತಿಂಗಳಿನಿಂದ ಹಲವು ಆಯಾಮಗಳಲ್ಲಿ ಆರೋಪಿಗಳ ಮಾಹಿತಿಗಳನ್ನು ಪೊಲೀಸರು ಕಲೆ ಹಾಕಿದರು.
ಕಾರ್ಯಚರಣೆ ತಂಡ: ಪೊಲೀಸ್ ಅಧೀಕ್ಷಕ ಕ್ಯಾಪ್ಟನ್ ಎಂ.ಎ.ಅಯ್ಯಪ್ಪ, ವಿರಾಜಪೇಟೆ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ನಿರಂಜನ್ ರಾಜೇ ಅರಸ್‌ರವರ ಮಾರ್ಗದರ್ಶನದಲ್ಲಿ ಕುಟ್ಟ ವೃತ್ತ ಸಿಪಿಐ ಸಿ.ಎ.ಮಂಜಪ್ಪ, ಮಡಿಕೇರಿ ಗ್ರಾಮಾಂತರ ವೃತ್ತ ಸಿಪಿಐ ಅನೂಪ್ ಮಾದಪ್ಪ, ಡಿಎಸ್‌ಬಿ ಐ.ಪಿ.ಮೇದಪ್ಪ, ಡಿಸಿಆರ್‌ಬಿ ಪಿ.ಐ.ನಾಗೇಶ್ ಕದ್ರಿ, ವಿರಾಜಪೇಟೆ ವೃತ್ತ ಸಿಪಿಐ ಬಿ.ಎಸ್.ಶಿವರುದ್ರ, ಗೋಣಿಕೊಪ್ಪ ವೃತ್ತ ಸಿಪಿಐ ಗೋವಿಂದರಾಜು, ಗೋಣಿಕೊಪ್ಪ ಪೊಲೀಸ್ ಠಾಣಾ ಪಿಎಸ್‌ಐ ಕೆ.ಪಿ.ದಿಕ್ಷೀತ್ ಕುಮಾರ್, ಪೊನ್ನಂಪೇಟೆ ಪೊಲೀಸ್ ಠಾಣಾ ಪಿಎಸ್‌ಐ ಸುಬ್ರಮಣಿ, ಕುಟ್ಟ ಅಪರಾಧ ಘಟಕದ ಪಿಎಸ್‌ಐ ರವಿ ಸೇರಿದಂತೆ ಇತರೆ ಅಧಿಕಾರಿಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು. ಅಪರಾಧ ಪ್ರಕರಣವನ್ನು ಪತ್ತೆ ಹಚ್ಚಿದ ತಂಡದ ಕಾರ್ಯಕ್ಷಮತೆಯನ್ನು ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಹೆಚ್ಚಿನ ಅಪರಾಧಗಳಲ್ಲಿ ಹೊರ ರಾಜ್ಯಗಳಿಂದ ಬಂದ ಕೂಲಿ ಕಾರ್ಮಿಕರು ಭಾಗಿಯಾಗಿರುವುದು ಕಂಡುಬಂದಿದೆ. ಆದ್ದರಿಂದ ಹೊರ ರಾಜ್ಯದ ಕೂಲಿ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸುವಾಗ ತೋಟದ ಮಾಲೀಕರು ಕಡ್ಡಾಯವಾಗಿ ಕಾರ್ಮಿಕರ ಅಪರಾಧ ಹಿನ್ನಲೆಯನ್ನು ಪರಿಶೀಲಿಸಿಕೊಂಡು ಅವರಿಂದ ನೈಜ ದಾಖಲಾತಿಗಳನ್ನು ಪರಿಶೀಲಿಸಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಅವಶ್ಯಕವಾಗಿದೆ. ಕಾರ್ಮಿಕರ ಇತ್ತೀಚಿನ ಭಾವಚಿತ್ರವನ್ನು ಪಡೆಯುವುದರೊಂದಿಗೆ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಕೆಲಸಕ್ಕೆ ನೇಮಿಸಿಕೊಂಡ ಕಾರ್ಮಿಕರ ಮಾಹಿತಿಯನ್ನು ನೀಡುವಂತಾಗಬೇಕು.
ಎಂ.ಎ.ಅಯ್ಯಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ